

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಪಟ್ಟಣದ ಮೂಲಕ ಹಾದು ಹೋಗುವ ಕಾರವಾರ-ಇಲಕಲ್ಲ ರಾಷ್ಟ್ರೀಯ ಹೆದ್ದಾರಿ ಯೋಜನೆ ನನೆಗುದಿಗೆ ಬಿದ್ದು 8 ವರ್ಷ ಕಳೆದಿದ್ದು, ನೂತನ ಸಂಸದ ಬಸವರಾಜ ಬೊಮ್ಮಾಯಿಯವರಾದರೂ ಈ ಯೋಜನೆಗೆ ಮರುಜೀವ ನೀಡುವರೇ ಎಂದು ಈ ಭಾಗದ ಜನರು ಆಶಾಭಾವದಿಂದ ಎದುರು ನೋಡುತ್ತಿದ್ದಾರೆ. ಈ ಮಧ್ಯೆ ಸಂಸದರು ಕೂಡ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದು ಸ್ಥಳೀಯರಲ್ಲಿ ಭರವಸೆಯ ಆಶಾಕಿರಣ ಮೂಡಿದೆ.
ಈಗಾಗಲೇ ಗದಗ-ವಾಡಿ ರೈಲ್ವೆ ಯೋಜನೆ ಕೈತಪ್ಪಿ ಕೊಪ್ಪಳ ಜಿಲ್ಲೆ ಪಾಲಾಗಿ ಕಾಮಗಾರಿ ಮುಗಿಯುವ ಹಂತ ತಲುಪಿದೆ. ಆದರೆ, ಕಳೆದ 8 ವರ್ಷಗಳ ಹಿಂದೆ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಿದ್ದರೂ ಕಾರವಾರ- ಇಲಕಲ್ಲ ಹೈವೇ ಇಂದಿಗೂ ಕಾಮಗಾರಿ ಪ್ರಾರಂಭವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ನೂತನ ಸಂಸದ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ಕಾಳಜಿ ವಹಿಸಿ ಯೋಜನೆ ಸಾಕಾರಾಗೊಳಿಸಲಿ ಎನ್ನುವ ಆಶಯ ಸ್ಥಳೀಯ ನಾಗರಿಕರದ್ದಾಗಿದೆ.
2016ರಲ್ಲಿ ಕೇಂದ್ರ ಸರ್ಕಾರ ದೇಶದ ಒಟ್ಟು 2266 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಲಾಗಿತ್ತು. ಕಾರವಾರ-ಕೈಗಾ-ಮುಂಡಗೋಡ-ಸವಣೂರ-ಗದಗ-ನರೇಗಲ್ಲ-ಗಜೇಂದ್ರಗಡ-ಇಲಕಲ್ಲ (318 ಕಿ.ಮೀ) ಅನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಹಸಿರು ನಿಶಾನೆ ತೋರಿಸಲಾಗಿತ್ತು. ಅದರಂತೆ, 318 ಕಿ.ಮೀ ದ್ವಿಪಥದ ರಸ್ತೆ ನಿರ್ಮಾಣದ ಡಿಪಿಆರ್(ಸಮಗ್ರ ಯೋಜನಾ ವರದಿ) ತಯಾರಿಸಿ ಸಲ್ಲಿಸಲಾಗಿತ್ತು. 2019ರ ಡಿಸೆಂಬರ್ ಮತ್ತು 2020ರ ಜನವರಿಯಲ್ಲಿ ಉನ್ನತೀಕರಿಸಲಾಗಿದ್ದ ಎಲ್ಲ ರಸ್ತೆ ಕಾಮಗಾರಿಗಳ ಯೋಜನಾ ವರದಿಯನ್ನು ಮರುಪರಿಶೀಲಿಸಲಾಗಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಬಹುತೇಕ ಯೋಜನೆಗಳನ್ನು ತಡೆ ಹಿಡಿಯಲಾಗಿದೆ. ಈಗ ನೂತನ ಸಂಸದ ಬೊಮ್ಮಾಯಿಯವರು ಆಸಕ್ತಿ ವಹಿಸಿ ತಡೆ ಹಿಡಿಯಲಾಗಿರುವ ಕಾರವಾರ-ಇಲಕಲ್ಲ ಹೈವೇ ಕಾಮಗಾರಿಗೆ ಮರುಜೀವ ನೀಡಬೇಕು ಎಂಬುದು ಜನರ ಕೋರಿಕೆಯಾಗಿದೆ.
ವಾಣಿಜ್ಯೋದ್ಯಮಕ್ಕೆ ಸಹಕಾರಿ: ಕಾರವಾರದಿಂದ ಹೈದರಾಬಾದ್ ಸಂಪರ್ಕಿಸಲು ಅತ್ಯಂತ ಸಮೀಪದ ಮತ್ತು ಪ್ರಮುಖ ಹೆದ್ದಾರಿ ಇದಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಸಮೀಪದ ಮಾರ್ಗವೂ ಇದಾಗಿದೆ. ಅವಘಡಗಳು ಸಂಭವಿಸಿದಲ್ಲಿ ರಕ್ಷಣಾ ಕಾರ್ಯಕ್ಕೆ ಅನುಕೂಲವಾಗುವಂತೆ ಈ ರಸ್ತೆ ಮೇಲ್ದರ್ಜೆಗೆ ಏರಿಸುವುದು ಅತ್ಯವಶ್ಯಕವಾಗಿದೆ. ಈ ರಸ್ತೆ ಅಭಿವೃದ್ಧಿಯಿಂದ ಕರಾವಳಿ ಭಾಗ ಮತ್ತು ಉತ್ತರ ಕರ್ನಾಟಕದ ಭಾಗಗಳ ಸಂಪರ್ಕ ಹೆಚ್ಚಾಗುವುದರೊಂದಿಗೆ ಪ್ರವಾಸೋದ್ಯಮ ಮತ್ತು ವಾಣಿಜ್ಯೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಕಲ್ಯಾಣ ಕರ್ನಾಟಕ ಸಂಪರ್ಕಿಸುವ ಕಾರವಾರ-ಇಲಕಲ್ಲ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಿ ಉನ್ನತೀಕರಿಸಲಾಗಿದೆ ಎನ್ನುವ ಸಂಗತಿ ತಿಳಿದು ತುಂಬಾ ಸಂತೋಷವಾಗಿತ್ತು. ಆದರೆ, ಕಾಮಗಾರಿಗೆ ನೂರೆಂಟು ವಿಘ್ನಗಳು ಎದುರಾಗುತ್ತಿವೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೂ ಇದಕ್ಕೆ ಮೂಲ ಕಾರಣವಾಗಿದೆ. ಹೆದ್ದಾರಿ ನಿರ್ಮಾಣದಿಂದ ಈ ಭಾಗದಲ್ಲಿ ಸಾಕಷ್ಟು ಆರ್ಥಿಕ ಚಟುವಟಿಕೆಗಳಿಗೆ ಸಹಾಯಕವಾಗಲಿದೆ. ಆದ್ದರಿಂದ, ನೂತನ ಸಂಸದರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕಾಮಗಾರಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಬೇಕು. ಡಾ. ಜಿ.ಕೆ. ಕಾಳೆ, ನರೇಗಲ್ಲ ನಿವಾಸಿ
ಕಾರವಾರ-ಇಲಕಲ್ಲ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಪ್ರಾರಂಭಿಸುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಬುಧವಾರ ಮನವಿ ಸಲ್ಲಿಸಲಾಗಿದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಕಾರವಾರ-ಇಲಕಲ್ಲ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ.ಬಸವರಾಜ ಬೊಮ್ಮಾಯಿ, ಗದಗ-ಹಾವೇರಿ ಲೋಕಸಭಾ ಸಂಸದ