ಆರೋಗ್ಯ ಸೇವೆ ಸದುಪಯೋಗಪಡಿಸಿಕೊಳ್ಳಲಿ

30M.D.R.2.....
Published on

ಮದ್ದೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಆರೋಗ್ಯ ಸೇವಾ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಹೇಳಿದರು.

ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಮಂಡ್ಯ ಲಯನ್ಸ್ ಸಂಸ್ಧೆ ಹಾಗೂ ಎಂ.ಎಚ್.ಚನ್ನೇಗೌಡ ವಿದ್ಯಾನಿಲಯದ ವತಿಯಿಂದ ಸೋಮವಾರ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಹಾಗೂ ಜನ ಆರೋಗ್ಯ ಯೋಜನೆ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯು 2019ರಿಂದ ಜಾರಿಗೆ ಬಂದಿದ್ದು, ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೋಂದಣಿಯಾಗಿಲ್ಲ. ಸಂಘ-ಸಂಸ್ಥೆಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಜನರಿಗೆ ಯೋಜನೆಯ ಬಗ್ಗೆ ಅರಿವು ಮೂಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವಂತೆ ಇತರರಿಗೂ ಯೋಜನೆಯ ಬಗ್ಗೆ ಅರಿವು ಮೂಡಿಸಬೇಕೆಂದು ಹೇಳಿದರು.

ಯೋಜನೆಯ ಫಲಾನುಭವಿಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬಿ.ಪಿ.ಎಲ್. ಕಾರ್ಡ್‌ದಾರರು 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಲ್ಲದೇ ಅಗತ್ಯ ಸಮಯದಲ್ಲಿ ಇನ್ನು ಹೆಚ್ಚಿನ ಚಿಕಿತ್ಸೆ ಪಡೆಯಬಹುದು. ಎ.ಪಿ.ಎಲ್. ಕಾರ್ಡ್‌ದಾರರು 1.5 ಲಕ್ಷದವರೆಗೆ ಚಿಕಿತ್ಸೆ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ಕಾರ್ಡಿನ ಅವಶ್ಯಕತೆ ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾಗಲಿದೆ ಎಂದು ಹೇಳಿದರು.
ಮಂಡ್ಯ ಲಯನ್ಸ್ ಸಂಸ್ಧೆಯ ಅಧ್ಯಕ್ಷ ಅನಂತು ಮಾತನಾಡಿ, ಲಯನ್ಸ್ ಸಂಸ್ಧೆಯು ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆಗಳಿಗೆ ಸಹಕಾರಿಯಾಗಲಿ ಎಂದು ಹಲವು ಶಿಬಿರಗಳನ್ನು ಆಯೋಜಿಸುತ್ತಿದ್ದು, ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಪೌಷ್ಟಿಕ ಆಹಾರಗಳನ್ನು ತೆಗೆದುಕೊಳ್ಳುವ ಮೂಲಕ ಆರೋಗ್ಯವಂತರಾಗಬೇಕೆಂದರು.

ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಧೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಪ್ರಾಂಶುಪಾಲ ಜಿ.ಎಸ್.ಶಂಕರೇಗೌಡ, ಯು.ಎಸ್.ಶಿವಕುಮಾರ್, ಲಯನ್ಸ್ ಸಂಸ್ಧೆಯ ಗರುಪಾದಸ್ವಾಮಿ, ಹರ್ಷ, ಉಪನ್ಯಾಸಕರಾದ ಎಚ್.ಎಸ್.ಪಂಚಲಿಂಗೇಗೌಡ, ಜಿ.ಎಸ್.ನಂದಿನಿ, ಎನ್.ರೇವಣ್ಣ, ಸಿ.ಜಯವರ್ಧನ್, ಬಿ.ಸಿ.ಶಿವಕುಮಾರ್, ಮೋಹನ್‌ಕುಮಾರ್ , ಮುಖ್ಯ ಶಿಕ್ಷಕರಾದ ಎನ್.ಕೃಷ್ಣ, ಎಂ.ಟಿ.ಚಂದ್ರಶೇಖರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net