

ಕುಶಾಲನಗರ: ಆರೋಗ್ಯ ಉಚಿತ ಶಿಬಿರಗಳು ಹೆಚ್ಚಿನ ಫಲಾನುಭವಿಗಳನ್ನು ತಲುಪುವಂತಾಗಬೇಕು. ಆರೋಗ್ಯ ಶಿಬಿರಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ದೊರಕುವ ಅಗತ್ಯ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯುಷ್ಮಾನ್‌ಭವ ಕಾರ್ಯಕ್ರಮದ ಪ್ರಯುಕ್ತ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಜನಸಾಮಾನ್ಯರನ್ನು ತಲುಪಿದಾಗ ಮಾತ್ರ ಇಂತಹ ಶಿಬಿರಗಳು ಯಶಸ್ಸು ಗಳಿಸಲು ಸಾಧ್ಯ ಎಂದರು.
ನೇತ್ರದಾನ, ಅಂಗಾಂಗ ದಾನ ನೋಂದಣಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ನಮ್ಮನ್ನಾಳುವ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗುವ ಮೂಲಕ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕಿದೆ ಎಂದರು.
ಆರೋಗ್ಯ ಮೇಳದಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ಸೇವೆಗಳು, ಮಕ್ಕಳ ಸೇವೆಗಳು, ಕಣ್ಣು, ಕಿವಿ, ಮೂಗು, ಗಂಟಲು ತಪಾಸಣೆ, ಮಾನಸಿಕ ತಜ್ಞರ ಸೇವೆಗಳು ಹಾಗೂ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನಾರೋಗ್ಯ, ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್ ನೋಂದಣಿ, ಕಫ ಸಂಗ್ರಹಣೆ, ಅಸಾಂಕ್ರಾಮಿಕ ರೋಗಗಳ ತಪಾಸಣೆ, ಐಸಿಟಿಸಿ ಸಮಾಲೋಚನೆ ಹಾಗೂ ಇತರ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಮಂಜುನಾಥ್ ಗುಂಡುರಾವ್, ಪಪಂ ಮಾಜಿ ಸದಸ್ಯ ಜೋಸೆಫ್ ವಿಕ್ಟರ್ ಸೋನ್ಸ್, ಪ್ರಮುಖರಾದ ನಟೇಶ್ ಗೌಡ, ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಧುಸೂದನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ ಹಾಗೂ ವೈದ್ಯ ವೃಂದ, ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಇದ್ದರು.