ದಾರಿ ತೋರುವ ಗುರುಗಳಿಗಿರಲಿ ಸ್ಪಷ್ಟತೆ

MDG Pravachana
Published on

ಮುಂಡರಗಿ: ಲಿಂಗಾಯತ ಎಂದರೆ ವಿಶ್ವ ಕುಟುಂಬ, ಮಾನವ ಹಕ್ಕುಗಳ ಪ್ರತಿಪಾದಿಸುವ ಪ್ರತಿನಿಧಿ. 12ನೇ ಶತಮಾನದಲ್ಲಿ ಶರಣರ ಅನುಭವ ಮಂಟಪದ ಮೂಲಕ ದೊಡ್ಡ ಪ್ರಮಾಣದಲ್ಲಿ ಮನುಷ್ಯತ್ವ ಹಕ್ಕು ಪ್ರತಿಪಾದನೆಯಾಯಿತು. ಇಷ್ಟಲಿಂಗದ ಮುಖಾಂತರ ಮನುಷ್ಯತ್ವದ ಸ್ವರೂಪ ಅರಿಯುವುದಕ್ಕೆ ತಾತ್ವಿಕ ಶಿವಯೋಗ ತಂದರು. ಎಲ್ಲರನ್ನೂ ಒಳಗೊಂಡವರೇ ಲಿಂಗಾಯತ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಮಂಗಳವಾರ ಜರುಗಿದ ಅನುಭಾವಿಗಳ ಅನುಭಾವ ದರ್ಶನ ಪ್ರವಚನದಲ್ಲಿ ಅವರು ಮಾತನಾಡಿದರು. ಮನುಷ್ಯನು ಮೂಲ ಸ್ವರೂಪಕ್ಕಾಗಿ ಇಷ್ಟಲಿಂಗದ ಕಡೆಗೆ ಹೋಗಬೇಕು. ಮನುಷ್ಯತ್ವದ ಪ್ರತಿಪಾದನೆ ಜಾಗೃತಗೊಳಿಸಬೇಕು. ಗುರುವಾದವನಿಗೆ ಜಾತಿ ಇಲ್ಲ. ದಾರಿ ತೋರುವ ಗುರು ಸ್ಪಷ್ಟತೆಯಿಂದ ಇರಬೇಕು. ಬಸವಣ್ಣನವರು ಸ್ಪಷ್ಟತೆ ನಿಲುವು ತೋರಿದರು. ಬಸವಾದಿಶರಣರ ತಾತ್ವಿಕ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಗುರುಗಳು ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗಬೇಕು ಎಂದರು.

ಅಶೋಕ ಬರಗುಂಡಿ ಮಾತನಾಡಿ, ವಚನಗಳು ನಮ್ಮನ್ನು ಮನುಷ್ಯರನ್ನಾಗಿಸುತ್ತವೆ. ಸಕಲ ಜೀವರಾಶಿಗೆ ಚೈತನ್ಯ ನೀಡಿದ ಸೃಷ್ಟಿಯಲ್ಲಿ ನಾವೆಲ್ಲ ಒಂದೇ. ಸತ್ಯವನ್ನು ತಿಳಿಸುವ ಕೆಲಸ ಬಸವಣ್ಣನವರು ಮಾಡಿದರು. ಶರಣರು ಸಮಾಜದೊಳಗೆ ಎಲ್ಲರೂ ನ್ಯಾಯಯುತವಾಗಿ ಬದುಕಬೇಕೆನ್ನುವ ಸಲುವಾಗಿ ಶ್ರಮಿಸಿದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net