

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ 44,850 ಸಾವಿರ ಮಹಿಳೆಯರು ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದು, 192 ಮಹಿಳೆಯರು ಯೋಜನೆಯಿಂದ ಹೊರಗುಳಿದಿದ್ದಾರೆ. ಇವರನ್ನು ಈ ಯೋಜನೆಗೆ ಒಳಪಡುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ತಾಲೂಕಿನಲ್ಲಿ 192 ಮಹಿಳೆಯರು ಯೋಜನೆಯಿಂದ ಹೊರಗುಳಿದಿದ್ದು, ಮಹಿಳೆಯರ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಇ&ಕೆವೈಸಿ ಮಾಡಿಸದಿರುವುದು, ಆಧಾರ್ ಜೋಡಣೆ ಸಮಸ್ಯೆ ಬಗೆಹರಿಸಿ ಅರ್ಹರೆಲ್ಲರೂ ಯೋಜನೆಯ ಲಾಭ ಪಡೆದು ಶೇ.100ರಷ್ಟು ಪ್ರಗತಿ ಸಾಧಿಸಲು ಇಲಾಖೆ ಶ್ರಮವಹಿಸಬೇಕೆಂದು ತಿಳಿಸಿದರು.
ಕಳೆದ ತಿಂಗಳು 3 ಪೋಕ್ಸೋ ಪ್ರಕರಣ ತಾಲೂಕಿನಲ್ಲಿ ದಾಖಲಾಗಿದೆ. ಬಾಲ್ಯವಿವಾಹ ಮತ್ತು ಪೋಕ್ಸೋ ವಿರುದ್ಧ ಅಧಿಕಾರಿಗಳು ವಿಶೇಷ ಕ್ರಮ ಕೈಗೊಳ್ಳಬೇಕು. ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಿತ ಎಲ್ಲ ಇಲಾಖೆಗಳು ಕೈಜೋಡಿಸಿದಾಗ ಈ ಅಕ್ರಮ ತಡೆಯಲು ಸಾಧ್ಯ. ಹಲವು ಕ್ರಮಗಳನ್ನೂ ಕೈಗೊಂಡರೂ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣ ಹೇರಲು ಸಾಧ್ಯವಾಗಿಲ್ಲ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದರು.
ತುರುವೇಕೆರೆ ಕೆಎಸ್ಆರ್ಟಿಸಿ ಬಸ್ ಡಿಪೋ ಘಟಕಾಧಿಕಾರಿ * ಮಾತನಾಡಿ, ಶಕ್ತಿ ಯೋಜನೆಗೆ 2023 ರಿಂದ ಜಿಲ್ಲೆಯ ಎಲ್ಲ ಘಟಕಗಳಿಗೆ ಈವರೆಗೆ 476 ಕೋಟಿ ರೂ. ಹಣ ಬಿಡುಗಡೆಯಾಗಬೇಕಿದೆ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರಿನಲ್ಲಿ ಪ್ರಯಾಣಿಕರು ನಿಲ್ಲುತ್ತಿದ್ದು, ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ನಿತ್ಯ ಪರದಾಡುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರಿ ಬಸ್ಗಳು ಖಾಸಗಿ ಬಸ್ ನಿಲ್ದಾಣದ ಒಳಗೆ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.