ಬೆಳೆಗಾರರು ಗುಣಮಟ್ಟದ ಕಾಫಿ ಬೆಳೆಯಲಿ

ಸಕಲೇಶಪುರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಕಾಫಿ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ದೊಡ್ಡಣ್ಣ,  ಸಿಮೆಂಟ್ ಮಂಜು ಇತರರಿದ್ದರು.
ಸಕಲೇಶಪುರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಕಾಫಿ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ದೊಡ್ಡಣ್ಣ, ಸಿಮೆಂಟ್ ಮಂಜು ಇತರರಿದ್ದರು.
Published on

ಸಕಲೇಶಪುರ: ಕ್ಷಣಿಕ ಸುಖದ ಆಸೆಗಾಗಿ ಭೂಮಿ ಮಾರಾಟ ಮಾಡಬೇಡಿ ಎಂದು ಚಲನಚಿತ್ರ ನಟ ದೊಡ್ಡಣ್ಣ ಕಾಫಿ ಬೆಳೆಗಾರರಿಗೆ ಕಿವಿಮಾತು ಹೇಳಿದರು.

ಕರ್ನಾಟಕ ಗ್ರೋವರ್ಸ್‌ ಫೆಡರೇಷನ್, ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘ ಹಾಗೂ ಪದ್ಮಭೂಷಣ ಡಾ.ಎಸ್.ಎಲ್.ಭೈರಪ್ಪ ವೇದಿಕೆ ವತಿಯಿಂದ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಕಾಫಿ ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನತ್ತ ಬೆಂಗಳೂರಿನ ಉದ್ಯಮಿಗಳ ಕಣ್ಣು ಹಾಕಿದ್ದು, ಹೆಚ್ಚು ಹಣದ ಆಮಿಷವೊಡ್ಡಿ ಭೂಮಿ ಖರೀದಿಸುತ್ತಿದ್ದಾರೆ. ಇಂತಹ ಉದ್ಯಮಿಗಳ ಬಲೆಗೆ ಸಾಕಷ್ಟು ಬೆಳೆಗಾರರು ಬಲಿಯಾಗುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಂದರು.

ಒಮ್ಮೆ ಕಳೆದುಕೊಂಡರೆ ಭೂಮಿಯನ್ನು ಮತ್ತೊಮ್ಮೆ ಪಡೆಯಲು ಸಾಧ್ಯವಿಲ್ಲ. ಮಲೆನಾಡು ಸ್ವರ್ಗವಿದ್ದಂತೆ. ಇಲ್ಲಿ ಬದುಕಿದ್ದವರು ಮತ್ತೊಂದೆಡೆ ಬದುಕು ಕಟ್ಟಿಕೊಳ್ಳುವುದು ಕಷ್ಟಸಾಧ್ಯ. ಸ್ವಂತ ಮಾರುಕಟ್ಟೆ ಇದ್ದರೆ ಮಾತ್ರ ಯಾವುದೇ ಬೆಳೆಯನ್ನು ನಿರಂತಕವಾಗಿ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢ ಹೊಂದಬಹುದು. ಕರ್ನಾಟಕದ ಕಾಫಿ ಸರ್ವಶ್ರೇಷ್ಠ ಎಂಬ ಹೆಸರು ಪಡೆದಿರುವುದರಿಂದ ಗುಣಮಟ್ಟದ ಕಾಫಿ ಬೆಳೆಯಲು ಹೆಚ್ಚಿನ ಆದ್ಯತೆ ನೀಡಿ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸಮಸ್ಯೆಗಳ ನಡುವೆಯೂ ಬದುಕು ಕಟ್ಟಿಕೊಂಡಿರುವ ಕಾಫಿ ಬೆಳೆಗಾರರು ಸಾಹಸಿಗಳು. ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಕಾಡಾನೆ ಕಾಟ ಅತಿಯಾಗಿದೆ. ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಅಧ್ಯಯನ ನಡೆಸಿ ಯೋಜನೆ ರೂಪಿಸಬೇಕು. ಕಳೆದ ಐದು ತಿಂಗಳಿನಿಂದ ಮಳೆಯಾಗುತ್ತಿದ್ದು, ಇದರಿಂದ ಶೇ.50 ರಷ್ಟು ಕಾಫಿ ಬೆಳೆ ನೆಲ ಸೇರಿದೆ. ಆದ್ದರಿಂದ ಮುಖ್ಯಮಂತ್ರಿ ಕಾಫಿ ಬೆಳೆಗಾರರಿಗೆ ಬೆಳೆಪರಿಹಾರ ಬಿಡುಗಡೆ ಮಾಡಬೇಕು ಎಂದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕೆಸಗಾನಹಳ್ಳಿ ಮಾತನಾಡಿ, ಆಂತರಿಕ ಬಳಕೆ ಹೆಚ್ಚಾದಾಗ ಅಂತಾರಾಷ್ಟ್ರೀಯ ಅವಲಂಬನೆ ತಪ್ಪಲಿದೆ. ಮುಂದಿನ 20 ವರ್ಷಗಳಲ್ಲಿ ಕಾಫಿ ಬೆಳೆಯನ್ನು ಎರಡರಷ್ಟು ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಕಾಫಿ ಮಂಡಳಿ ಹತ್ತು ಹಲವು ಯೋಜನೆಗಳು ಹಾಕಿಕೊಂಡಿದೆ ಎಂದರು.

ಬಿಬಿಎಂಪಿ ವೈಧ್ಯಾಧಿಕಾರಿ ಡಾ.ಸುಪುತ್ರಗೌಡ ಮಾತನಾಡಿ, ನಿತ್ಯ ಮೂರು ಕಪ್ ಕಾಫಿ ಕುಡಿಯುವುದರಿಂದ ಶೇ .18 ರಷ್ಟು ಹೃದಯಾಘಾತ ತಪ್ಪಿಸಬಹುದಾಗಿದೆ. ಅಲ್ಲದೆ ಕಾಫಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ಅಂತಾರಾಷ್ಟ್ರೀಯ ಸಂಶೋಧನೆ ಹೊರಹಾಕಿದೆ ಎಂದರು.

ಪಟ್ಟಣದ ಹೇಮಾವತಿ ಪ್ರತಿಮೆಯಿಂದ ಬಸವೇಶ್ವರ ಪ್ರತಿಮೆವರೆಗೆ ಮಲೆನಾಡು ಸುಗ್ಗಿ ಕುಣಿತದೊಂದಿಗೆ ಬೃಹತ್ ಮೆರವಣಿಗೆ ನಡೆಯಿತು. ಪಟ್ಟಣದ ಬೈಪಾಸ್ ರಸ್ತೆ ಕೆಂಪೇಗೌಡ ಪ್ರತಿಮೆ ಬಳಿ ಕಾಫಿ ದಿನಾಚರಣೆ ಅಂಗವಾಗಿ ಸಾವಿರಾರು ಪ್ರವಾಸಿಗರಿಗೆ ಕಾಫಿಯನ್ನು ಉಚಿತವಾಗಿ ನೀಡಲಾಯಿತು.

ಕಾರ್ಯಕ್ರಮದ ಅಂಗವಾಗಿ ಹೆತ್ತೂರಿನ ಹಿರಿಯ ಕಾಫಿ ಬೆಳೆಗಾರ ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು. ಕಾಫಿ ಬೆಳೆಗಾರ ಹಾಗೂ ಶಿಕ್ಷಕ ವೆಂಕಟೇಶ್ ಅವರ ಪುತ್ರಿ ಸಾನ್ವಿಕಾ ಅವರ ಭರತನಾಟ್ಯ ಗಮನ ಸೆಳೆಯಿತು. ಎಚ್‌ಡಿಪಿಎ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಕೆ.ಬಿ.ಲೋಹಿತ್, ಬಿ.ಎಂ.ನಾಗರಾಜ್, ಮಿಸ್ ಯೂನಿವರ್ಸ್ ಕರ್ನಾಟಕ ಡಾ.ವಂಶಿ ಉದಯ್, ಚಲನಚಿತ್ರ ನಟ ವಿಶ್ವರಾಜ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net