ಹಸಿರು ಶಾಲು ನೈಜ ಹೋರಾಟಕ್ಕೆ ಬಳಕೆಯಾಗಲಿ

ಹಸಿರು ಶಾಲು ನೈಜ ಹೋರಾಟಕ್ಕೆ ಬಳಕೆಯಾಗಲಿ
Published on

ತಿ.ನರಸೀಪುರ: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ರೈತನೊಬ್ಬ ರೈತ ಸಂಘದ ಶಾಲನ್ನು ಮುಕ್ತವಾಗಿ ಹಾಕಿಕೊಂಡರೆ ಅಭ್ಯಂತರವಿಲ್ಲ. ದಲ್ಲಾಳಿ ಕೆಲಸವನ್ನು ಮಾಡಲಿಕ್ಕೆ ಶಾಲನ್ನು ಧರಿಸಿ ಚಳವಳಿಗೆ ದ್ರೋಹ ಮಾಡುವ ಕೆಲಸವನ್ನು ಸಹಿಸಲ್ಲ ಎಂದು ರಾಜ್ಯ ರೈತ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ, ಇತ್ತೀಚೆಗೆ ನಿಧನರಾದ ರೈತ ಸಂಘದ ಹಿರಿಯ ಮುಖಂಡ ವೈ.ಕೆ.ಶಿವಣ್ಣ ಅವರಿಗೆ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರೈತ ಸಂಘವು ಕೂಡ ಬಣಗಳಾಗಿ ವಿಘಟನೆಯಾಗುತ್ತಿವೆ. ರೈತ ಸಂಘಟನೆ ಹಸಿರು ಶಾಲಿಗೆ ಇರುವ ಶಕ್ತಿ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಲಿ. ಅದನ್ನು ಬಿಟ್ಟು ಸರ್ಕಾರಿ ಕಚೇರಿಗಳಲ್ಲಿ ಇದನ್ನು ದುರ್ಬಳಕೆ ಮಾಡಿಕೊಂಡರೆ ಸಂಘಟನೆ ಹಾಗೂ ನೈಜ ಹೋರಾಟಗಾರರಿಗೆ ಎಸಗಿದ ದ್ರೋಹವಾಗಿದೆ ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳ ಸರ್ಕಾರಗಳು ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿವೆ. ರೈತರ ಬೆಳೆಗೆ ಸೂಕ್ತವಾದ ಬೆಂಬಲ ಬೆಲೆ ಹಾಗೂ ಮಾರುಕಟ್ಟೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇಂತಹ ಬೇಜವಾಬ್ದಾರಿ ಸರ್ಕಾರಗಳ ವಿರುದ್ಧ ನಿರಂತರ ಹೋರಾಟವನ್ನು ರೈತ ಸಂಘ ಮಾಡುತ್ತಲೇ ಇದೆ. ಸಂಘಟನೆಯ ಒಡನಾಡಿಯಾಗಿ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ಹಿರಿಯ ಮುಖಂಡ ವೈ.ಕೆ.ಶಿವಣ್ಣ ಅವರ ಅಗಲಿಕೆಯಲ್ಲಿ ನಷ್ಟವಾಗಿದೆ. ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ನೀಡಲಿ ಎಂದು ಹೇಳಿದರು.

ಸಂಘದ ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ ಮಾತನಾಡಿ, ಸರ್ಕಾರಗಳ ರೈತ ವಿರೋಧಿ ಧೋರಣೆ ಹಾಗೂ ಅಧಿಕಾರಿಗಳ ಅನ್ಯಾಯದ ಕಾರ್ಯವೈಖರಿಗೆ ವಿರುದ್ಧ ರೈತ ಸಂಘ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬರುತ್ತಿದೆ. ದಶಕಗಳ ಕಾಲ ನಮ್ಮೊಟ್ಟಿಗೆ ಚಳವಳಿ ಹಾಗೂ ಹೋರಾಟದಲ್ಲಿ ಭಾಗವಹಿಸುತ್ತಿದ್ದ ವೈ.ಕೆ. ಶಿವಣ್ಣ ಅವರು ಸದಾ ಕಾಲ ಮುಂಚೂಣಿಯಲ್ಲಿರುತ್ತಿದ್ದರು ಎಂದು ಸ್ಮರಿಸಿದರು.

ಸಭೆಯಲ್ಲಿ ವೈ ಕೆ ಶಿವಣ್ಣ ಕುಟುಂಬ ಸದಸ್ಯರನ್ನು ಗೌರವಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ಹಿರಿಯ ಮುಖಂಡ ರೇಚಣ್ಣ, ತಾಲೂಕು ಗೌರವಾಧ್ಯಕ್ಷ ಹಲವಾರ ಮಹದೇವಸ್ವಾಮಿ, ಉಪಾಧ್ಯಕ್ಷ ತಲಕಾಡು ದಿನೇಶ, ಪ್ರಧಾನ ಕಾರ್ಯದರ್ಶಿ ಬೂದಹಳ್ಳಿ ಶಂಕರ್, ಮುಖಂಡರಾದ ಮಹೇಶ್ ಕುಮಾರ್, ಶಾಂತ ಮೂರ್ತಿ, ಚಂದ್ರು ಸುಜ್ಜಲೂರು, ಶಿವಣ್ಣ ಇತರರಿದ್ದರು.

ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ: ಸಂತಾಪ ಸಭೆಯ ಬಳಿಕ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಮುಂಭಾಗ ಜಮಾವಣೆಗೊಂಡ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಬೂದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಮಳೆಯಾಶ್ರಿತ ಭೂ ಪ್ರದೇಶದಲ್ಲಿ ಬಿತ್ತನೆಗೆ ವಿತರಿಸಿದ್ದ ಕಳಪೆ ಮುಸುಕಿನ ಜೋಳ ಮೊಳಕೆ ಒಡೆಯದ ಕಾರಣ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ಕೆ.ಎಸ್.ಸುಹಾಸಿನಿ ಅವರು ಪರಿಹಾರ ಕಲ್ಪಿಸಲು ಕಾಲಾವಕಾಶ ಕೇಳಿದ್ದಕ್ಕೆ, ರೈತ ಮುಖಂಡರು ಮುಸುಕಿನ ಜೋಳ ಹಾಕಿ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡುವವರೆಗೂ ಪ್ರತಿಭಟನೆ ಕೂರುತ್ತೇವೆ ಎಂದು ಪಟ್ಟು ಹಿಡಿದು, ಕಳಪೆ ಬೀಜ ಪೂರೈಸಿದ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net