

ಕೋಟ: ಕಾಡು ಕಡಿದು ನಾಡು ಮಾಡುವ ತವಕದಲ್ಲಿ ಪ್ರಕೃತಿ ನಾಶವಾಗುತ್ತಿದೆ. ಇದರ ದುಷ್ಪರಿಣಾಮವನ್ನು ನಾವು ಪ್ರಸ್ತುತ ಅನುಭವಿಸುತ್ತಿದ್ದೇವೆ. ಇದಕ್ಕಾಗಿ ಇಂದಿನಿಂದಲೇ ಪ್ರತಿಯೊಬ್ಬರೂ ಗಿಡ ನಡುವ ಸಂಕಲ್ಪ ಮಾಡಬೇಕು ಎಂದು ಕೋಡಿ ಗ್ರಾಪಂ ಪೂರ್ವಾಧ್ಯಕ್ಷ ಸದಸ್ಯ ಪ್ರಭಾಕರ್ ಮೆಂಡನ್ ನುಡಿದರು.
ಕೋಡಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಮಣೂರು ಗೀತಾನಂದ ಫೌಂಡೇಶನ್, ಪಂಚವರ್ಣ ಸಂಘಟನೆ ಸಂಯೋಜನೆಯೊಂದಿಗೆ ಬ್ರಹ್ಮಾವರ ಶಿಶು ಅಭಿವೃದ್ದಿ ಯೋಜನೆ, ಸಮನ್ವಯ ಸಂಜೀವಿನಿ ಒಕ್ಕೂಟ ಸಹಕಾರದೊಂದಿಗೆ ಮೂರು ತಿಂಗಳ ‘ಹಸಿರು ಜೀವ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಂಚವರ್ಣದ ಪರವಾಗಿ ರವೀಂದ್ರ ಕೋಟ ಹಸಿರು ಜೀವ ಅಭಿಯಾನದ ಕುರಿತು ಸಮಗ್ರ ಮಾಹಿತಿ ನೀಡಿ ಇಡೀ ಜಿಲ್ಲೆಗೆ ಮಾದರಿ ಎಂಬಂತೆ ಒಂದು ಪಂಚಾಯಿತಿ ಮೂರು ತಿಂಗಳುಗಳ ಕಾಲ ಗಿಡ ನಡುವ ಹಸಿರು ಜೀವ ಸಂಕಲ್ಪ ಯೋಜನೆ ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.
ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿ ಅಧ್ಯಕ್ಷತೆ ವಹಿಸಿ ಗಿಡ ವಿತರಿಸಿ ಅಭಿಯಾನವನ್ನು ಉದ್ಘಾಟಿಸಿದರು. ಪಂಚಾಯಿತಿ ಸದಸ್ಯರಾದ ಕೃಷ್ಣ ಪೂಜಾರಿ ಪಿ., ಸತೀಶ್ ಕುಂದರ್, ಪಂಚವರ್ಣದ ಪ್ರಮುಖರಾದ ಕೇಶವ ಆಚಾರ್ ಕೋಟ, ಶಿಶು ಅಭಿವೃದ್ಧಿ ಇಲಾಖೆಯ ಲಕ್ಷ್ಮೀ, ಹಸಿರು ಅಭಿಯಾನದ ರೂವಾರಿಗಳಾದ ಅಂಗನವಾಡಿ, ಸಂಜೀವಿನಿಯ ಸೇನಾನಿಗಳು ಉಪಸ್ಥಿತರಿದ್ದರು. ಪಿಡಿಒ ರವೀಂದ್ರ ರಾವ್ ನಿರೂಪಿಸಿದರು. ಹಸಿರು ಜೀವ ಅಭಿಯಾನ ಕೋಡಿ ಭಾಗದ ಮಾರ್ಗದರ್ಶಿ ಯಮುನಾ ಎಲ್.ಕುಂದರ್ ವಂದಿಸಿದರು.