ಚಿಣ್ಣರ ರಕ್ಷಣೆಗೆ ಅನುದಾನ ಬಳಕೆಯಾಗಲಿ

12
ಚಿಕ್ಕನಾಯಕನಹಳ್ಳಿ ಪಟ್ಟಣದ ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿದರು. ಶಿಕ್ಷಣ ಇಲಾಖೆಯ ಜಿಲ್ಲಾ ಉಪ ಯೋಜನಾ ಸಮನ್ವಾಯಾಧಿಕಾರಿ ಸೌಭಾಗ್ಯಮ್ಮ, ತಹಸೀಲ್ದಾರ್​ ಕೆ.ಪುರಂದರ, ಬಿಇಒ ಕಾಂತರಾಜು, ಸಿಪಿಐ ನದಾಫ್​, ಸಿಡಿಪಿಒ ಹೊನ್ನಪ್ಪ, ಸಹಾಯಕ ಕೃಷಿ ನಿರ್ದೇಶಕ ಶಿವರಾಜ್​ ಕುಮಾರ್​ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.
Published on

ತಾಲೂಕುಮಟ್ಟದ ಅಧಿಕಾರಿಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಸೂಚನೆ

ವಿಜಯವಾಣಿ ಸುದ್ದಿಜಾಲ ಚಿಕ್ಕನಾಯಕನಹಳ್ಳಿ
ತಾಲೂಕಿನ ಎಲ್ಲ ಶಾಲೆಗಳಲ್ಲಿ ಹದಿನೈದು ದಿನಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ, ಸಲಹಾ ಪೆಟ್ಟಿಗೆ, ಮಕ್ಕಳ ಸಹಾಯವಾಣಿ ಸಂಖ್ಯೆ ನಮೂದಿಸಬೇಕು. ಪ್ರತಿ 3 ತಿಂಗಳಿಗೊಮ್ಮೆ ತಹಸೀಲ್ದಾರ್​ ಅಧ್ಯಕ್ಷತೆಯಲ್ಲಿ ತಾಲೂಕುಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆ ಹಮ್ಮಿಕೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದರು.


ಪಟ್ಟಣದ ಆಡಳಿತ ಸೌಧದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕುಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನ ಎಲ್ಲ ಶಾಲಾ&ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ಪ್ರದರ್ಶನ ಮಾಡುವಂತ ಸೂಚನಾ ಫಲಕ ಅಳವಡಿಸಬೇಕು. ಕಾವಲು ಸಮಿತಿ ರಚನೆ ಮಾಡುವುದರ ಜತೆಗೆ ಪುರಸಭೆ ಹಾಗೂ ಪಪಂ ಮತ್ತು ಗ್ರಾಪಂಗಳಲ್ಲಿನ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಿಸುವುದು ಸೇರಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸೌಲಭ್ಯಗಳನ್ನು ನೀಡಬೇಕು. ನಾಯಿ ದಾಳಿಗೆ ಒಳಗಾದ ಮಕ್ಕಳಿಗೆ ಸಹಾಯಧನ ನೀಡದ ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್​ ನೀಡಬೇಕು. ತಾಲೂಕಿನ 27 ಗ್ರಾಪಂ ವ್ಯಾಪ್ತಿಯಲ್ಲಿ ಮಕ್ಕಳ ಕಾವಲು ಸಮಿತಿ ರಚಿಸಬೇಕು. ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ದಾಖಲೆ ಇರಿಸಬೇಕು. ಗ್ರಂಥಾಲಯಗಳಲ್ಲಿ ಮಕ್ಕಳ ರಕ್ಷಣೆಯ ಬಗ್ಗೆ ಗಮನಹರಿಸಬೇಕು. ಜತೆಗೆ ಮಕ್ಕಳ ಗ್ರಾಮಸಭೆಯನ್ನು ಕಾಟಾಚಾರಕ್ಕೆ ಮಾಡದೇ ಸಭೆಯಲ್ಲಿ ಮಕ್ಕಳ ಸಮಸ್ಯೆ ತಿಳಿಯುವಂತಾಗಬೇಕು ಎಂದು ತಾಲೂಕು ಪಂಚಾಯಿತಿ ಹಾಗೂ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದರು.


ಕಾರ್ಮಿಕ ಇಲಾಖೆ ವಿಫಲ: ತಾಲೂಕಿನಲ್ಲಿ ಬಾಲ ಕಾರ್ಮಿಕರನ್ನು ಗುರುತಿಸುವಲ್ಲಿ ಕಾರ್ಮಿಕ ಇಲಾಖೆ ಸಂಪೂರ್ಣ ವಿಫಲವಾಗಿದೆ. ಒಂದು ವೇಳೆ ಸರಿಯಿದ್ದರೆ ಬಾಲಕಾರ್ಮಿಕ ಮುಕ್ತ ತಾಲೂಕು ಎಂದು ಸರ್ಕಾರಕ್ಕೆ ಅಫಿಡವಿಟ್​ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸದ ಅವರು, ಸಣ್ಣ&ಪುಟ್ಟ ಅಂಗಡಿ, ಗ್ಯಾರೇಜ್​ಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯೋಮಾನದ ಅಪ್ರಾಪ್ತರು ಇಟ್ಟಿಗೆ ಕಾರ್ಖಾನೆಗಳಲ್ಲಿ ಹಾಗೂ ಅಪಾಯವಿರುವ ಕೆಲಸದ ಸ್ಥಳಗಳಲ್ಲಿ ಕೆಲಸ ಮಾಡುವ ಮಕ್ಕಳ ಮೇಲೆ ಕಣ್ಣಿಟ್ಟು ಕಾರ್ಖಾನೆಗಳ ಮಾಲೀಕರಿಗೆ ಎಚ್ಚರ ನೀಡುವ ಕೆಲಸವಾಗಬೇಕು. ಹಾಗೂ ದ್ರೀಕಾಲ ಗೈರಾಗುವ ವಿದ್ಯಾರ್ಥಿಗಳ ಮಾಹಿತಿ ಪಡೆದು ಅವರ ಬಗ್ಗೆ ನಿಗಾವಹಿಸಿಸುವಂತೆ ಅಧಿಕಾರಿಗಳಿಗೆ ಡಾ.ಕೆ.ಟಿ.ತಿಪ್ಪೇಸ್ವಾಮಿ ಎಚ್ಚರಿಸಿದರು.

ಆರೋಗ್ಯಾಧಿಕಾರಿಗಳು ಗಮನಹರಿಸಿ: ಶಾಲೆಗೆ ಪದೇಪದೆ ಅನಾರೋಗ್ಯದ ಕಾರಣದಿಂದ ಗೈರಾಗುವ ವಿದ್ಯಾರ್ಥಿಗಳ ಬಗ್ಗೆ ಸಂಬಂಧಪಟ್ಟ ಶಾಲಾ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು ಗಮನಹರಿಸಬೇಕು. ಸಭೆಯಲ್ಲಿ ಶಿಶು ಮರಣದ ಬಗ್ಗೆ ಮಾಹಿತಿ ಕೇಳಿದಾಗ ತಾಲೂಕು ಆರೋಗ್ಯಾಧಿಕಾರಿಯ ಬಳಿ ಮಾಹಿತಿಯಿರಲಿಲ್ಲ ಹಾಗೂ 2 ಅಪ್ರಾಪ್ತ ಗರ್ಭಿಣಿ ಪ್ರಕರಣಗಳಿದ್ದು, ಈ ಬಗ್ಗೆ ಪೋಕ್ಸೊ ಕಾಯ್ದೆ ದಾಖಲಿಸಿ ಕ್ರಮಕೈಗೊಳ್ಳುವಂತೆ ತಿಳಿಸಿದರು. ಇತ್ತೀಚೆಗೆ ಪ್ರೇಮ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಈ ಬಗ್ಗೆ ಪೊಲೀಸ್​ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಎಚ್ಚರಿಕೆಯಿಂದಿರಲು ಸಲಹೆ ನೀಡಿದರು.

ಸುರಕ್ಷತಾ ಕ್ರಮಕೈಗೊಳ್ಳಿ: ಬೆಸ್ಕಾಂ ಸಿಬ್ಬಂದಿ ಶಾಲೆಗಳು, ವಸತಿನಿಲಯಗಳ ಭಾಗದಲ್ಲಿ ವಿದ್ಯುತ್​ ತಂತಿ ಹಾಕಿದ್ದರೆ ಅದನ್ನು ತೆರವುಗೊಳಿಸಲು ಮುಂದಾಗಬೇಕು. ಹೆಚ್ಚಿನ ಅಪಘಾತಗಳು ನಡೆಯುವ ಹಾಗೂ ಶಾಲಾ ವ್ಯಾಪ್ತಿಯಲ್ಲಿ ಹಾದುಹೋಗುವ ರಸ್ತೆಗಳಲ್ಲಿ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಲು ಸಂಬಂಧಪಟ್ಟ ಲೋಕೊಪಯೋಗಿ ಇಲಾಖೆ ಎಚ್ಚರವಹಿಸಬೇಕು. ಜಿಲ್ಲಾ ಮಕ್ಕಳ ಘಟಕದಿಂದ ಏಕ ಪಾಲಕ ಹಾಗೂ ಅನಾಥ ಮಕ್ಕಳಿಗೆ ಮಾಸಿಕ 4 ಸಾವಿರ ರೂ.ಸಹಾಯಧನ ನೀಡುವಂತಹ ಯೋಜನೆ ಇದ್ದು, ಅರ್ಹ ಮಕ್ಕಳನ್ನು ಗುರುತಿಸಿ ಸಹಾಯ ಮಾಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net