

ಗೋಣಿಕೊಪ್ಪ: ಗ್ರಾಮ ಪಂಚಾಯಿತಿ ಜನರ ಸಮಸ್ಯೆ ಬಗೆಹರಿಸುವ ಕೇಂದ್ರವಾಗಿದ್ದು, ಸುಸಜ್ಜಿತ ಕಟ್ಟಡದ ಅವಶ್ಯಕತೆಯನ್ನು ಮನಗಂಡು ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇಚರ್ ಪ್ಯಾರಡೈಸ್ ಬಡಾವಣೆ ಮಾಲೀಕ ಪೊನ್ನೀರ ಚೇತನ್ ಹಾಗೂ ಅಪ್ಪಡೇರಂಡ ದೀನು ದಾನವಾಗಿ ನೀಡಿರುವ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರಕುವುದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಾತ್ರ. ಸರ್ಕಾರದ ಕಲ್ಪನೆ ಮತ್ತು ಸಾರ್ವಜನಿಕರ ಬೇಡಿಕೆಗಳಿಗೆ ಅನುಸಾರವಾಗಿ ಬೆಳೆಯುತ್ತಿರುವ ಸಮಾಜಕ್ಕೆ ಹೊಂದಿಕೊಂಡು ನೂತನ ಕಟ್ಟಡಗಳು ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗೆ ಕಚೇರಿಗೆ ಉಚಿತವಾಗಿ ನಿವೇಶನ ನೀಡಿದ್ದು, ದಾನಿಗಳಿಗೆ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸಿದರು.
ಯಾವುದೇ ಅಡೆತಡೆಗಳಲ್ಲಿದೆ ಕಟ್ಟಡ ನಿರ್ಮಾಣವಾಗಬೇಕು. ಗ್ರಾಮೀಣ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಂತೆ ಕಚೇರಿ ಹೊಂದಿಕೊಂಡು ಹೋಗಬೇಕು. ಸರ್ಕಾರದ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಎಸ್.ಪ್ರಸನ್ನ ಮಾತನಾಡಿ, ಗ್ರಾಮ ಪಂಚಾಯಿತಿಗೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಬೇಕು ಎನ್ನುವ ಕಲ್ಪನೆ ಎಲ್ಲ ಸದಸ್ಯರಿಗಿತ್ತು. ಗ್ರಾಮ ಪಂಚಾಯಿತಿಗೆ ಬೇಕಾಗುವ ನಿವೇಶನ ದೊರಕುವುದು ಕಷ್ಟ ಸಾಧ್ಯವಾಗಿತ್ತು. ಇದೀಗಾ ಚೇತನ್ ಮತ್ತು ದೀನು ಸ್ಥಳ ನೀಡಿದ್ದಾರೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದರು.