ಸರ್ಕಾರದ ಯೋಜನೆ ತಲುಪಲಿ

Published on

ಬಳ್ಳಾರಿ : ಕಡು ಬಡತನದ ಕುಟುಂಬಗಳಿಗೆ ಸರ್ಕಾರದ ಯೋಜನೆಗಳ ಮಾಹಿತಿ ನೀಡಿ ಅವರ ಜೀವನೋಪಾಯವನ್ನು ಸುಧಾರಿಸಿ ಬಡತನದಿಂದ ಹೊರಬರುವಂತೆ ಮಾಡುವುದು ನಾರಿ-ಕಿಲ್ಪ್ ಯೋಜನೆಯ ಉದ್ದೇಶವಾಗಿದೆ ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಹೇಳಿದರು.

ನಗರದ ಜಿಪಂ ಕಚೇರಿಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಅಭಿಯಾನದಡಿ ನಾರಿ-ಕಿಲ್ಪ್ ಯೋಜನೆಯ ಕುರಿತು ಸ್ವಸಹಾಯ ಗುಂಪಿನ ಮಹಿಳೆಯರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾರಿ-ಕಿಲ್ಪ್ ಕಾರ್ಯಕ್ರಮವನ್ನು ಮೊದಲ ಹಂತದಲ್ಲಿ ಜಿಲ್ಲೆಯ 2 ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ಅತೀ ಬಡವರನ್ನು ಗುರಿಯಾಗಿಸಿ, ಅಂತಹ ಕುಟುಂಬಗಳ ಗುರುತಿಸುವಿಕೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪಿಆರ್‌ಒ ಮನೆ-ಮನೆ ಸಮೀಕ್ಷೆ ಕೈಗೊಳ್ಳಲು ಪ್ರತಿ ಗ್ರಾಮ ಪಂಚಾಯತಿಗೆ ಇಬ್ಬರಂತೆ ಸ್ವ-ಸಹಾಯ ಸಂಘದ ಸದಸ್ಯರನ್ನು ಆಯ್ಕೆ ಮಾಡಿ ಅವರಿಗೆ 4 ದಿನಗಳ ಕ್ಷೇತ್ರ ಭೇಟಿ ಒಳಗೊಂಡಂತೆ ತರಬೇತಿ ನೀಡಲಾಗುತ್ತದೆ ಎಂದರು.

ಕಡುಬಡತನದ ಕುರಿತು ಸರಿಯಾದ ಕ್ರಮದಲ್ಲಿ ಮಹಿಳಾ ಸಮೀಕ್ಷೆದಾರರು ತರಬೇತಿ ಪಡೆದು ಅತ್ಯಂತ ದುರ್ಬಲ ಕುಟುಂಬಗಳ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಮಾಹಿತಿ ನೀಡಿದರೆ ನಾರಿ-ಕಿಲ್ಪ್ ಯೋಜನೆಯ ಅನುಷ್ಠಾನ ಪ್ರಯೋಜನವಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net