ಸರ್ಕಾರ ಪಿಎಲ್​ಡಿ ಬ್ಯಾಂಕ್​ನಲ್ಲಿನ ರೈತರ ಸಾಲ ಮನ್ನಾ ಮಾಡಲಿ

BYADAGI PLD BANK MEETING
Published on

ಬ್ಯಾಡಗಿ: ಪಿಎಲ್​ಡಿ ಬ್ಯಾಂಕ್​ನಲ್ಲಿ ಸಾಲ ಮನ್ನಾ ಮಾಡುವ ಮೂಲಕ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ನೆರವಾಗಬೇಕಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಒತ್ತಾಯಿಸಿದರು.

ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್​ನಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಎರಡು ಬಾರಿ ಸಾಲ ಮನ್ನಾ ಘೊಷಣೆ ವೇಳೆ ರಾಷ್ಟ್ರೀಯ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ರೈತರಿಗೆ ಮಾತ್ರ ಪ್ರಯೋಜನ ದೊರೆತಿದೆ. ಇಲ್ಲಿನ ರೈತರ ಸಾಲಗಳು ಉಳಿದುಕೊಂಡು ಬ್ಯಾಂಕ್ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಹತ್ತಾರು ವರ್ಷಗಳ ಸಾಲ ಮರುಪಾವತಿಯಿಲ್ಲದೆ, ರೈತರಿಗೆ ತೀವ್ರ ತೊಂದರೆಯಾಗಿದೆ. ಎರಡು ವರ್ಷಗಳ ಕಾಲ ಅತಿವೃಷ್ಟಿ, ಅನಾವೃಷ್ಟಿಯಿಂದ ಸಂಕಷ್ಟದಲ್ಲಿ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಕೂಡಲೇ ಬ್ಯಾಂಕ್​ನಲ್ಲಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಕಾಸ್ಕಾರ್ಡ್ ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ ಮಾತನಾಡಿ, ರೈತರು ಮಳೆ-ಬೆಳೆಯಿಲ್ಲದೆ ಆತಂಕ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಬ್ಯಾಡಗಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ರೈತರ ಸಾಲ ಮನ್ನಾ ಮಾಡಬೇಕು. ಎಕರೆ ಜಮೀನಿಗೆ 10 ಸಾವಿರ ರೂ. ಪರಿಹಾರ ಘೊಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಶೇರು ಹಣವನ್ನು 500 ರಿಂದ 1 ಸಾವಿರ ರೂಪಾಯಿಗೆ ಏರಿಕೆ ಮಾಡಲು ಒಕ್ಕೂರಲಿನಿಂದ ನಿರ್ಧರಿಸಲಾಯಿತು.

ಬ್ಯಾಂಕ್ ಅಧ್ಯಕ್ಷ ಮುರಡೆಪ್ಪ ಹೆಡಿಯಾಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಯಪ್ಪ ಎಲಿ, ನಿರ್ದೇಶಕರಾದ ಮಹದೇವಪ್ಪ ಶಿಡೇನೂರು, ಶಿವಯೋಗಿ ಉಕ್ಕುಂದ, ಅರುಣಕುಮಾರ ಕರಡೇರ, ಸಂಕೇತಗೌಡ್ರ ಪಾಟೀಲ, ಹನುಮಗೌಡ್ರ ಪಾಟೀಲ, ಪ್ರಶಾಂತ ಮುದುಕಮ್ಮನವರ, ಮಾರ್ತಾಂಡಪ್ಪ ಮಾದರ, ಲತಾ ಸಂಕಣ್ಣನವರ, ಪುಷ್ಟಾ ಪಾಟೀಲ, ರೇಣುಕವ್ವ ಕರಿಯಮ್ಮನವರ, ಮಹದೇವಪ್ಪ ಓಲೇಕಾರ, ಉಮೇಶ ಚೌದರಿ, ಗಂಗಣ್ಣ ಎಲಿ, ಮುರಿಗೆಪ್ಪ ಶೆಟ್ಟರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net