

ನರಗುಂದ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಸರ್ಕಾರ ತಕ್ಷಣವೇ ಕೈಗೆತ್ತಿಕೊಳ್ಳಬೇಕು ಹಾಗೂ ಕಪ್ಪತಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಕರವೇ ಪ್ರವೀಣ ಶೆಟ್ಟಿ ಬಣದ ನೂರಾರು ಸದಸ್ಯರು ಗದಗ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನರಗುಂದದಿಂದ ಗುರುವಾರ ಪಾದಯಾತ್ರೆ ಪ್ರಾರಂಭಿಸಿದ್ದಾರೆ.
ಈ ವೇಳೆ ಸಂಘಟನೆಯ ಗದಗ ಜಿಲ್ಲಾಧ್ಯಕ್ಷ ವೆಂಕಟೇಶ ಬೇಲೂರ ಮಾತನಾಡಿ, ರಾಜಕಾರಣಿಗಳು ತಮ್ಮ ರಾಜಕೀಯ ಸ್ವ-ಪ್ರತಿಷ್ಠೆಗೆ ಮಹದಾಯಿ, ಕಳಸಾ ಬಂಡೂರಿ ಯೋಜನೆಯನ್ನು ಬಳಸಿಕೊಂಡಿದ್ದರಿಂದ ಮಹತ್ವದ ಯೋಜನೆಗೆ ಸಾಕಷ್ಟು ಹಿನ್ನೆಡೆಯಾಗಿದೆ. ರೈತರ ಮಹತ್ವದ ನ್ಯಾಯಯುತ ಬೇಡಿಕೆಗೆ ತಾತ್ವಿಕ ಅಂತ್ಯ ಕೈಗೊಳ್ಳುವ ಸಲುವಾಗಿ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಗದಗವರೆಗೆ ಪಾದಯಾತ್ರೆ ಕೈಗೊಂಡಿದ್ದೇವೆ. ಕುರ್ಲಗೇರಿ, ತಡಹಾಳ, ನಾಯಕನೂರ ಮಾರ್ಗವಾಗಿ ಪಾದಯಾತ್ರೆ ತೆರಳಿ ನವಲಗುಂದ ತಾಲೂಕು ಶಲವಡಿಯಲ್ಲಿ ಗ್ರಾಮವಾಸ್ತವ್ಯ ಹೂಡಲಿದೆ. ಸೆ. 20ರಂದು ಶೆಲವಡಿಯಿಂದ ತುಪ್ಪದಕುರಹಟ್ಟಿ, ವೆಂಕಟಾಪೂರ, ಹೊಂಬಳ ಮಾರ್ಗವಾಗಿ ಗದಗನ ಮುಳಗುಂದ ನಾಕಾದಲ್ಲಿ ಮಾನಸ ಸರಪಳಿ ರಚಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಬಳಿಕ ಗದಗ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ, ಉತ್ತರ ಕರ್ನಾಟಕದ ಕರವೇ ಅಧ್ಯಕ್ಷ ಶರಣು ಗದ್ದುಗೆ ಹಾಗೂ ಇತರೆ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ದಾವಲಸಾಬ್ ಮುಳಗುಂದ, ಶ್ರೀನಿವಾಸ ಭಂಡಾರಿ, ತಿಮ್ಮಣ್ಣ ಡೋಣಿ, ಸಹದೇವ ಕೋಟಿ, ಪರಶುರಾಮ ಬಂಕದಮನಿ, ಹನುಮಂತ ಶಿದ್ಲಿಂಗ, ಮೈಲಾರಪ್ಪ ಕೋಟೆಪ್ಪನವರ, ಮಂಜುನಾಥ ಬಾಗಿ, ವೆಂಕಟೇಶ ಗುಜಮಾಗಡಿ, ವಾಸು ಚವ್ಹಾಣ, ಮಂಜುನಾಥ ಶಾಂತಗೇರಿ, ಮಣಿಕಂಠ ಬಂಡಾರಿ, ಚಂದ್ರಗೌಡ ಪಾಟೀಲ, ಎಸ್.ಬಿ. ಜೋಗಣ್ಣವರ, ಹನುಮಂತ ಸರನಾಯ್ಕರ್, ಈರಬಸಪ್ಪ ಹೂಗಾರ, ಸುಭಾಷ ಗಿರಿಯಣ್ಣವರ, ಅರ್ಜುನ ಮಾನೆ, ಶಂಕ್ರಪ್ಪ ಜಾಧವ, ಬಸಪ್ಪ ಗುಡದರಿ, ಪರಮೇಶಪ್ಪ ಅಣ್ಣಿಗೇರಿ, ಯಲ್ಲಪ್ಪ ತಳವಾರ, ಮಲ್ಲಪ್ಪ ಐನಾಪೂರ, ಎಚ್.ಎನ್. ಕೋರಿ, ಇತರರು ಉಪಸ್ಥಿತರಿದ್ದರು.