ಖಾಸಗಿ ಶಾಲೆಗಳನ್ನು ಸರ್ಕಾರವೇ ವಹಿಸಿಕೊಳ್ಳಲಿ

06
ಹೊಳೆನರಸೀಪುರದ ಋಷಿ ಶ್ರೀವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಜಿಲ್ಲಾಧ್ಯಕ್ಷ ಶಿವರಾಮೇಗೌಡ ಉದ್ಘಾಟಿಸಿದರು. ರವಿಕುಮಾರ್, ಆಚಾರ್ಯ ಸುರೇಶ್, ಶೋಭಾ,ಬಾಲಕೃಷ್ಣ, ಗಂಗಾಧರ್, ತಾರಾಸ್ವಾಮಿ, ಭಾರತಿ ಇದ್ದರು.
Published on

ಹೊಳೆನರಸೀಪುರ: ಸರ್ಕಾರದ ಮಲತಾಯಿ ಧೋರಣೆಗೆ ಖಾಸಗಿ ಶಾಲೆಗಳು ನಲುಗುತ್ತಿದ್ದು, ಇದು ಬದಲಾಗಬೇಕಿದೆ. ಇಲ್ಲವಾದಲ್ಲಿ ಎಲ್ಲ ಖಾಸಗಿ ಶಾಲೆಗಳಿಗೆ ಸೂಕ್ತ ಪರಿಹಾರ ನೀಡಿ ಸರ್ಕಾರವೇ ವಹಿಸಿಕೊಳ್ಳಲಿ ಎಂದು ಅನುದಾನ ರಹಿತ ಶಾಲೆಗಳ ಒಕ್ಕೂಟದ ಹಾಸನ ಜಿಲ್ಲಾಧ್ಯಕ್ಷ ಶಿವರಾಮೇಗೌಡ ಹೇಳಿದರು.

ಕಾನೂನಿನಡಿ ಎಲ್ಲರಿಗೂ ಒಂದೇ ನಿಯಮ. ಆದರೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ನಿಯಮಗಳನ್ನು ಖಾಸಗಿ ಶಾಲೆಗಳು ಮಾತ್ರ ಪಾಲಿಸಬೇಕಿದೆ. ಖಾಸಗಿ ಶಾಲೆಗಳಿಗೆ ಅಗ್ನಿನಂದಕ ಅಳವಡಿಕೊಳ್ಳುವಂತೆ ಸೂಚಿಸಿದ್ದಿ ಈಗಾಗಲೇ ಇದನ್ನು ಖಾಸಗಿ ಶಾಲೆಗಳಲ್ಲಿ ಇರಿಸಲಾಗಿದೆ. ಆದರೆ ಸರ್ಕಾರ ಹೇಳಿದ ರೀತಿಯಲ್ಲೇ ಅಳವಡಸಿಕೊಳ್ಳಲು ಸಾಧ್ಯ ಇಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ನ್ಯಾಯಾಲಯ ಇದಕ್ಕೆ ರಿಯಾಯಿತಿ ನೀಡಿದೆ. ಆದರೆ ಶಿಕ್ಷಣ ಇಲಾಖೆ ಅದನ್ನು ಕಡ್ಡಾಯ ಮಾಡವ ಮೂಲಕ ನ್ಯಾಯಲಯದ ಆದೇಶದ ವಿರುದ್ಧ ನಡೆದುಕೊಳ್ಳುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಖಾಸಗಿ ಶಾಲೆಗಳು 5 ವರ್ಷಕ್ಕೊಮ್ಮೆ ಪರವಾನಿಗೆ ನವೀಕರಿಸಿಕೊಂಡರೆ ಸಾಕು ಎಂದು ನ್ಯಾಯಾಲಯ ತಿಳಿಸಿದೆ. ಆದರೆ ಶಿಕ್ಷಣ ಇಲಾಖೆ ಪ್ರತಿ ವರ್ಷ ನವೀಕರಿಸಿಕೊಳ್ಳುವಂತೆ ಕಿರುಕುಳ ನೀಡುತ್ತಿದೆ. ಖಾಸಗಿ ಶಾಲೆಗಳ ಪೈಕಿ ಶೇ.80 ರಷ್ಟು ಖಾಸಗಿ ಶಾಲೆಗಳು ಸಿಸಿ ಟಿವಿ ಅಳವಡಿಸಿಕೊಂಡಿದ್ದು, ಅನೇಕ ಸರ್ಕಾರಿ ಶಾಲೆಗಳಲ್ಲಿ ಕ್ಯಾಮರಾ ಅಳವಡಿಸಿಕೊಂಡಿಲ್ಲ. ಇದು ಸರ್ಕಾರದ ಸ್ಪಷ್ಟ ಮಲತಾಯಿ ಧೋರಣೆ ಅಲ್ಲದೆ ಮತ್ತೇನು ಎಂದು ಅಸಮಾಧಾನ ಹೊರಹಾಕಿದರು.

ರಾಜಧಾನಿಯಲ್ಲಿನ ಶಾಲೆಗಳನ್ನು ನೋಡಿ ಸರ್ಕಾರ ನಿಯಮ ರೂಪಿಸಿದೆ. ಈ ನಿಯಮಗಳನ್ನು ಅಳವಡಿಕೊಳ್ಳಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಶಾಲೆಗಳಿಗೆ ಸಾಧ್ಯವೇ ಇಲ್ಲ.ಕೋವಿಡ್ ಸಂದರ್ಭದಲ್ಲೂ ಶಿಕ್ಷಕರಿಗೆ ಸಂಬಳ ನಿಲ್ಲಿಸಿಲ್ಲ. ರಾಜ್ಯದಲ್ಲಿ 12 ಲಕ್ಷ ಫುಡ್ ಕಿಟ್ ವಿತರಿಸಲಾಗಿದೆ. ಜತೆಗೆ ಸರ್ಕಾರ ವಿಧಿಸುವ ಎಲ್ಲ ಶುಲ್ಕಗಳನ್ನು ಪ್ರತಿ ವರ್ಷ ಪಾವತಿಸಲಾಗುತ್ತಿದೆ. ಇಷ್ಟೆಲ್ಲ ಮಾಡುತ್ತಿದ್ದರೂ ಖಾಸಗಿ ಶಾಲೆಗಳನ್ನು ಸರ್ಕಾರ ತುಚ್ಚವಾಗಿ ನಡೆಸಿಕೊಳ್ಳುತ್ತಿದೆ ಎಂದು ಹೇಳಿದರು.

ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಗಂಗಾಧರ್, ಹಾಸನ ವಿಜಯಾ ಶಾಲೆಯ ತಾರಾಸ್ವಾಮಿ, ನೇತ್ರಾವತಿ ಶಾಲೆಯ ಕುಮಾರ್, ಋಷಿ ಶ್ರೀ ವಿದ್ಯಾಸಂಸ್ಥೆಯ ಆಚಾರ್ಯ ಸುರೇಶ್, ಚನ್ನರಾಯಪಟ್ಟಣದ ಜ್ಞಾನಸೌಧ ಕಾಲೇಜಿನ ಭಾರತಿ ಗಣೇಶ್, ಎ.ಆರ್. ರವಿಕುಮಾರ್, ಎಸ್‌ಎಲ್‌ಎನ್ ವಿದ್ಯಾಸಂಸ್ಥೆಯ ಹೊ.ಸು.ರಮೇಶ್, ಮಾನಸ ವಿದ್ಯಾಸಂಸ್ಥೆಯ ಶೋಭಾ ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.


ಇದಕ್ಕೂ ಮುನ್ನ ಪಟ್ಟಣದ ಋಷಿ ಶ್ರೀ ವಿದ್ಯಾಸಂಸ್ಥೆಯಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ವಾರ್ಷಿಕ ಮಹಾಸಭೆಗೂ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ಶಾಲೆಗಳ 150ಕ್ಕೂ ಹೆಚ್ಚು ಪದಾಧಿಕಾರಿಗಳು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net