

ಇಂಡಿ: ಭೀಮಾನದಿ ತೀರದಲ್ಲಿ ಭೀಕರ ಪರಿಸ್ಥಿತಿ ಇದ್ದರೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಈ ಭಾಗದ ಜನರು ಹಾಗೂ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕರವೇ ಅಧ್ಯಕ್ಷ ಬಾಳು ಮುಳಜಿ ದೂರಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಮಾನದಿಯು ವಿಜಯಪುರ, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ಜನರ ಜೀವನಾಡಿಯಾಗಿದೆ.
ಮಹಾರಾಷ್ಟ್ರದ ಭೀಮಾಶಂಕರದಲ್ಲಿ ಹುಟ್ಟಿ ಒಟ್ಟು 786 ಕಿಲೋ ಮೀಟರ್ ಹರಿಯುವ ಈ ನದಿಯು ಕರ್ನಾಟಕದಲ್ಲಿ 289 ಕಿ.ಮೀ. ಹರಿಯುತ್ತದೆ.
ನದಿಯ ದಡಗಳಲ್ಲಿ ಒಟ್ಟು 164 ಹಳ್ಳಿಗಳ ಲಕ್ಷಾಂತರ ಜನ ಮತ್ತು ಜಾನುವಾರು ಭೀಮಾ ನೀರನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಭೀಮಾನದಿಗೆ ಕಾನೂನಾತ್ಮಕವಾಗಿ ಬರಬೇಕಿರುವ ನೀರಿನ ಪಾಲನ್ನು ಪಡೆಯುವ ನಿಟ್ಟಿನಲ್ಲಿ ನೆರೆಯ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರುವ ತುರ್ತು ಅಗತ್ಯವಿದೆ.
ಬಚಾವತ್ ಆಯೋಗ 1976ರಲ್ಲಿ ನೀಡಿದ ತೀರ್ಪಿನಂತೆ ಒಟ್ಟು 351 ಟಿಎಂಸಿ ನೀರಿನಲ್ಲಿ ಮಹಾರಾಷ್ಟ್ರ 300.6 ಕರ್ನಾಟಕ 45.3 ಮತ್ತು ಆಂಧ್ರಪ್ರದೇಶ 5.1 ಟಿಎಂಸಿ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿತ್ತು.
ಆರಂಭದ ಕೆಲವು ವರ್ಷ ಮಹಾರಾಷ್ಟ್ರದ ಉಜನಿ ಆಣೆಕಟ್ಟೆಯಿಂದ ನೀರನ್ನು ಬಳಕೆ ಮಾಡಿಕೊಳ್ಳಲು ಬಿಡಲಾಗುತ್ತಿತ್ತು. 1985ರವರೆಗೆ 9.30 ಟಿಎಂಸಿ ನೀರು ಬಿಡುತ್ತಿದ್ದ ಮಹಾರಾಷ್ಟ್ರ 1986ರಿಂದ 1998ರವರೆಗೆ 1.70 ಟಿಎಂಸಿ ನೀರು ಹರಿಸಿತ್ತು.
ನಂತರ ಅದು ನಿಂತು ಹೋಗಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆ ಬಂದು ಡ್ಯಾಂ ತುಂಬಿದರೂ, 1998ರಿಂದ ನಮ್ಮ ಹಕ್ಕಿನ 15 ಟಿಎಂಸಿ ನೀರು ನಮಗೆ ದಕ್ಕುತ್ತಿಲ್ಲ.
ನಮ್ಮ ಪಾಲಿನ ನೀರು ನಮಗೆ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.
ರಾಜು ಕುಲಕರ್ಣಿ, ಮಹೇಶ ಹೂಗಾರ, ಮಹಿಬೂಬ ಬೇನೂರ, ರಾಜು ಪಡಗಾನೂರ, ದಾದು ಕೋಣಸಿರಸಗಿ, ಸಚೀನ ನಾವಿ, ಶಿವಾನಂದ ಮಡಿವಾಳ, ಸಂದೇಶ ಗಲಗಲಿ, ಪ್ರವೀಣ ಪೊದ್ದಾರ, ಶ್ರೀಕಾಂತ ಬಡಿಗೇರ, ಧರ್ಮರಾಜ ಸಾಲೋಟಗಿ, ರವಿ ಹೂಗಾರ, ಸುನೀಲ ಹಿರೇಮಠ, ಪ್ರಕಾಶ ಬಿರಾದಾರ, ಪ್ರವೀಣ ತಂಗಾ, ಕೇಶವ ಕಾಟಕರ, ಸುಧಾಕರ ಹೂಗಾರ, ಪ್ರಶಾಂತ ಗುಂದಗಿ ಇತರರಿದ್ದರು.