

ಹಿರೇಕೆರೂರ: ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಗೆ ಬುಧವಾರ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಭೇಟಿ ನೀಡಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹುದ್ದೆ ತುಂಬುವ ವಿಚಾರದಲ್ಲಿ ಆಗುತ್ತಿರುವ ವಿಳಂಬ ಕುರಿತು ಸಭೆ ನಡೆಸಿದರು.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹುದ್ದೆ ತುಂಬುವ ವಿಚಾರದಲ್ಲಿ ಆಗುತ್ತಿರುವ ವಿಳಂಬ ಮತ್ತು ಒಪಿಎಸ್ ಜಾರಿಗೊಳಿಸದ ಸರ್ಕಾರದ ಧೋರಣೆ ಖಂಡಿಸುತ್ತೇನೆ. ಕಾಲ್ಪನಿಕ ವೇತನ ಭರ್ತಿ ಜಾರಿಗೊಳಿಸದಿರುವ ಬಗ್ಗೆ ನಾವು ಅಧಿವೇಶನದಲ್ಲಿ ಸತತ ಪ್ರಯತ್ನ ಮಾಡುತ್ತಿದ್ದೇವೆ. ನಿರುದ್ಯೋಗಿ ಪದವೀಧರರ ನೇಮಕಾತಿಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಶೀಘ್ರದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸುವುದು ಇವತ್ತಿನ ದಿನಮಾನಗಳಲ್ಲಿ ಬಹಳ ಕಷ್ಟಕರವಾಗಿದೆ. ಶಿಷ್ಯರು, ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶ್ರಮವಹಿಸಬೇಕು ಎಂದರು.
ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಹಾವೇರಿ ಜಿಲ್ಲಾ ಪದವಿ ಪೂರ್ವ ಉನ್ಯಾಸಕ ಸಂಘದ ಕಾರ್ಯಾಧ್ಯಕ್ಷ ಪ್ರಮೋದ, ರಾಜ್ಯ ಮಾಧ್ಯಮಿಕ ಶಾಲಾ ನೌಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಆರ್.ಎಚ್. ಬೆಟ್ಟಳ್ಳೇರ, ಪ್ರಾಂಶುಪಾಲರಾದ ಬಿ.ಪಿ. ಹಳ್ಳೇರ, ಕೆ.ಎಚ್. ಮಾವಿನತೋಪ, ಗುರುರಾಜ ಜೋಶಿ, ನಿವೃತ್ತ ಪ್ರಾಂಶುಪಾಲರಾದ ಕೆ.ಎಚ್. ಮರಿಗೌಡರ, ಕೆ.ಆರ್. ಲಮಾಣಿ, ಮುಖ್ಯಶಿಕ್ಷಕರಾದ ಆರ್.ಎಚ್. ಪೂಜಾರ, ಇತರರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ರಾಜು ಕರೆಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.