

ಮೈಸೂರು: ಹೊಸ ಆಸ್ಪತ್ರೆಯ ಮೂಲಸೌಕರ್ಯಕ್ಕೆ ಹಣ ವ್ಯರ್ಥ ಮಾಡುವ ಬದಲು ಈಗಾಗಲೇ ಸೇವೆ ಸಲ್ಲಿಸುತ್ತಿರುವ ಟ್ರಸ್ಟ್ ಆಸ್ಪತ್ರೆಗೆ ಸರ್ಕಾರ ಬೆಂಬಲ ನೀಡಬೇಕು ಎಂದು ಭಾರತ್ ಆಸ್ಪತ್ರೆ ಚೇರ‌್ಮನ್, ಸಂಸ್ಥಾಪಕ ಡಾ.ಬಿ.ಎಸ್.ಅಜಯಕುಮಾರ್ ಹೇಳಿದರು.
ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ಯಾನ್ಸರ್ ಕೇರ್ ಶೃಂಗಸಭೆ ಉದ್ಘಾಟಿಸಿದ ಅವರು, ‘ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಿಯಾತ್ಮಕ ಬದಲಾವಣೆಗಳು’ ಕುರಿತು ಮಾತನಾಡಿದರು.
ಸರ್ಕಾರ ನಮ್ಮಂತಹ ಟ್ರಸ್ಟ್ ಆಸ್ಪತ್ರೆಗಳನ್ನು (ಭಾರತ್ ಹಾಸ್ಪಿಟಲ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ) ಬೆಂಬಲಿಸಿ, ಮೇಲ್ವಿಚಾರಣೆ ಮಾಡಿದರೆ ಹಣ ಪೋಲಾಗದಂತೆ ತಡೆಯಬಹುದು. ಈಗಾಗಲೇ ಬಿಪಿಎಲ್ ಕಾರ್ಡ್, ಆಯುಷ್ಮಾನ್ ಭಾರತ್ ಮತ್ತು ಇತರ ಸರ್ಕಾರಿ ಆರೋಗ್ಯ ಯೋಜನೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ವೃಥಾ ಹಣ ಪೋಲು ಮಾಡುವ ಬದಲು ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿದೆಯೇ ಎಂಬುದರ ಮೇಲೆ ನಿಗಾ ಇಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಎಲ್ಲ ಆಸ್ಪತ್ರೆಗಳು ಖಾಸಗಿಯವರ ನಿಯಂತ್ರಣದಲ್ಲಿದ್ದು, ಸರ್ಕಾರ ಅವುಗಳ ಮೇಲ್ವಿಚಾರಣೆ ನಡೆಸುತ್ತದೆ. ಈ ಮಾದರಿಯನ್ನು ಸಂಸದೀಯ ಆರೋಗ್ಯ ಸಮಿತಿ ಸದಸ್ಯರ ಗಮನಕ್ಕೆ ತರುವುದಾಗಿ ತಿಳಿಸಿದರು.
35 ವರ್ಷಗಳನ್ನು ಪೂರೈಸಿದ ಭಾರತ್ ಹಾಸ್ಪಿಟಲ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಈವರೆಗೆ 70 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, 25 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದೆ ಎಂದರು.
ಭಾರತ್ ಆಸ್ಪತ್ರೆಯು ಮೈಸೂರಿನಲ್ಲೇ ಮೊದಲ ಬಾರಿಗೆ ರೋಬಾಟಿಕ್ ಶಸ್ತ್ರಚಿಕಿತ್ಸೆ ಆರಂಭಿಸುತ್ತಿದೆ. ಇದರಿಂದ ಕ್ಯಾನ್ಸರ್‌ಗೆ ನಿಖರ ಶಸ್ತ್ರಚಿಕಿತ್ಸೆ ಸಾಧ್ಯವಾಗಲಿದ್ದು, ರೋಗಿಗಳು ಬೇಗ ಚೇತರಿಕೆ ಹೊಂದಲಿದ್ದಾರೆ. ಆಸ್ಪತ್ರೆಯು ಕ್ಯಾನ್ಸರ್ ಸಂಶೋಧನೆಗಾಗಿ ಪ್ರತ್ಯೇಕ ಘಟಕ ತೆರೆಯಲು ಯೋಜಿಸಿದೆ ಎಂದು ಡಾ.ಅಜಯಕುಮಾರ್ ಮಾಹಿತಿ ನೀಡಿದರು.
ಶೃಂಗಸಭೆಯಲ್ಲಿ 70 ಪ್ರಬಂಧಗಳನ್ನು ಮಂಡಿಸಲಾಯಿತು. ಭಾರತ್ ಆಸ್ಪತ್ರೆಯ ಡಾ.ಪ್ರಶಾಂತಿ ಅವರು ಸ್ತನ ಕ್ಯಾನ್ಸರ್‌ನಲ್ಲಿ ಸಿಟಿ ಡಿಎನ್‌ಎಯ ಪಾತ್ರ ಎಂಬ ಮಾತನಾಡಿದರು.
ಡಾ.ಶೇಖರ್ ಪಾಟೀಲ, ಡಾ.ಮಾಧವಿ, ಡಾ. ಶ್ರೀನಿವಾಸ, ಡಾ.ಕವಿತಾ, ಡಾ.ವಿಜಯ ಕುಮಾರ, ಡಾ.ವಿನಯಕುಮಾರ ಮುತ್ತಗಿ ಇನ್ನಿತರರಿದ್ದರು