

ಯಳಂದೂರು: ಸರ್ಕಾರ ಸಾರ್ವಜನಿಕರ ಉಪಯೋಗಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕೆಲಸ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಕಿರಣ್‌ರಾಯ್ ಫಡ್ನೇಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಸಾರ್ವಜನಿಕರು, ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಸರ್ಕಾರ ಕೋಟ್ಯಾಂತರ ರೂ.ವ್ಯಯಿಸುತ್ತದೆ. ಇದನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಈ ಕೆಲಸವನ್ನು ನಾವು ನಿಷ್ಠೆಯಿಂದ ಮಾಡಬೇಕಾದರೆ ಕ್ಷೇತ್ರದಲ್ಲಿ ಸುತ್ತ ಬೇಕು. ಜತೆಗೆ ಮಾಹಿತಿ ಕಲೆ ಹಾಕಿ ಅದನ್ನು ನೀಡುವ ಗುರುತರ ಜವಾಬ್ದಾರಿಯನ್ನು ಹೊರಬೇಕು ಎಂದರು.
ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಶಾಲೆಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರು ನೀಡುತ್ತಿದ್ದಾರ ಎಂಬ ಮಾಹಿತಿಯನ್ನು ಬಿಇಒ ಪಡೆದುಕೊಳ್ಳಬೇಕು. ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಕಲಿಕೆಗೆ ಪೂರಕವಾಗುವ ವಾತಾವರಣ ನಿರ್ಮಿಸಬೇಕು. ಶೌಚಗೃಹಗಳ ಶುಚಿತ್ವಕ್ಕೆ ಆದ್ಯತೆ, ಕುಡಿಯುವ ನೀರು, ಆಟದ ಮೈದಾನ, ಸುತ್ತುಗೋಡೆ ಸೇರಿದಂತೆ ಇತರ ಸಮಸ್ಯೆಗಳ ನಿವಾರಣೆಗೆ ಲಭ್ಯವಿರುವ ಅನುದಾನವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧಿಕಾರಿಗಳಿಗೆ ತರಾಟೆ: ತಾಪಂ ಸಭಾಂಗಣದಲ್ಲಿ ಶುಚಿತ್ವ ಮಾಯವಾಗಿದೆ. ಸುಣ್ಣಬಣ್ಣ ಕಂಡಿಲ್ಲ. ಜತೆಗೆ ನೀರು ಸೋರಿಕೆಯಾಗುತ್ತಿದೆ. ಟೈಲ್ಸ್ ಕಳಚಿ ಬೀಳುತ್ತಿದ್ದು, ಗೋಡೆ ಬಿರುಕು ಬಿಡುತ್ತಿದೆ. ಇದರೊಳಗೆ ಗಿಡಗಳೂ ಬೆಳೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲೂ ಇಲ್ಲೇ ಸಭೆ ನಡೆಸಲಾಗುತ್ತಿದೆ. ಇದನ್ನು ಶುಚಿಯಾಗಿಟ್ಟುಕೊಳ್ಳಲು ಏನು ತೊಂದರೆ ಎಂದು ಗುಮಾಸ್ತ ರಾಜೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣಾಧಿಕಾರಿ, ಆಯುಷ್ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಸಿಬ್ಬಂದಿ ಕಳುಹಿಸಿದ್ದರೆ,. ಕೆಲವರು ಗೈರಾಗಿದ್ದಾರೆ. ಇವರಿಗೆ ಕೂಡಲೇ ನೋಟಿಸ್ ಜಾರಿ ಮಾಡಿ. ಸಿಬ್ಬಂದಿಗೆ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಹಾಗಾಗಿ ದಾಖಲೆ ಸಮೇತ ಸಭೆಗೆ ಬರಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬಿಸಿಎಂ ಇಲಾಖೆಗೆ 2.36 ಕೋಟಿ ರೂ. ಅನುದಾನ ಹೊಸ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಮಂಜೂರಾಗಿದ್ದು, ದಾನಿಗಳು ಖಾಲಿ ನಿವೇಶನ ನೀಡಿದ್ದರೂ ಈ ಕಾಮಗಾರಿ ಆರಂಭಗೊಂಡಿಲ್ಲ. ಕೃಷಿ ಇಲಾಖೆಯ ದುರಸ್ತಿಗೆ ಅನುದಾನ ಲಭ್ಯವಿದ್ದು ಇದನ್ನು ಪಂಚಾಯತ್ ರಾಜ್ ಇಲಾಖೆಗೆ ನೀಡಿದ್ದರೂ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಏಜೆನ್ಸಿಗೆ ನೋಟಿಸ್ ನೀಡಿ ಎಂದು ಸೂಚನೆ ನೀಡಿದರು. ಅಲ್ಲದೆ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಊಟ, ವಸತಿಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಊಟದ ಮೆನುವಿನ ಪ್ರಕಾರ ಗುಣಮಟ್ಟದ ಆಹಾರ ನೀಡಬೇಕು. ಅಂಗನವಾಡಿ ಮಕ್ಕಳಿಗೂ ಯಾವುದೇ ತೊಂದರೆಯಾಗಬಾರದು. ಈ ಬಗ್ಗೆ ದೂರು ಬಂದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದರು.
ಮುಂದಿನ ಸಭೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಹಾಜರಾಗಬೇಕು. ಸಭೆಗೆ ಸೂಕ್ತ ಮಾಹಿತಿ ನೀಡಬೇಕು. ಈ ಸಭೆಯಲ್ಲಿ ಆಗಿರುವ ತಪ್ಪನ್ನು ತಿದ್ದಿಕೊಳ್ಳಬೇಕು. ತಮಗೆ ನೀಡಿರುವ ಸೂಚನೆಗಳನ್ನು ಪಾಲನೆ ಮಾಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಪಮ ಇಒ ಉಮೇಶ್, ಸಹಾಯಕ ಲೆಕ್ಕಾಧಿಕಾರಿ ಪ್ರಭುಸ್ವಾಮಿ, ಸಿಡಿಪಿಒ ಸಕಲೇಶ್ವರ, ಬಿಇಒ ಕೆ.ಕಾಂತರಾಜು, ಸೆಸ್ಕ್ ಎಇಇ ನಿಂಗರಾಜು, ಕೃಷಿ ಇಲಾಖೆಯ ಅಮೃತೇಶ್ವರ, ಪಂಚಾಯತ್ ರಾಜ್ ಕುಡಿಯುವ ನೀರು ವಿಭಾಗದ ಎಇಇ ಶ್ರೀನಿವಾಸ್, ಪಶು ಇಲಾಖೆಯ ಡಾ. ಶಿವರಾಜ್, ತೋಟಗಾರಿಕೆ ಇಲಾಖೆಯ ಶಿವರಂಜನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.