

ಬೇಲೂರು; ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಪಶು ಪಾಲನೆ ಇಲಾಖೆ ಆವರಣದಲ್ಲಿ ಶನಿವಾರ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ನೀಡಲಾದ ಮೇವು ಕತ್ತರಿಸುವ ಯಂತ್ರ ಹಾಗೂ ಜಾನುವಾರುಗಳಿಗೆ ನೆಲ ಹಾಸುವ ರಬ್ಬರ್ ಮ್ಯಾಟ್‌ಗಳನ್ನು ರೈತರಿಗೆ ವಿತರಿಸಿ ಮಾತನಾಡಿದರು.
ರೈತನ ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ಹಸುಗಳ ಆರೋಗ್ಯವನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಸರ್ಕಾರ ವಿವಿಧ ರೀತಿಯ ಆಹಾರ ಪದಾರ್ಥ ನೀಡುತ್ತಿದೆ. ಜತೆಗೆ ಗುಣಮಟ್ಟದ ಲಸಿಕೆಯನ್ನೂ ಕೊಡಲಾಗುತ್ತಿದೆ. ಹಾಗಾಗಿ ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸದಾಶಿವಮೂರ್ತಿ ಮಾತನಾಡಿ, ಒಬ್ಬ ರೈತನಿಗೆ 2 ಮ್ಯಾಟ್‌ನಂತೆ 50 ಜನರಿಗೆ ಮ್ಯಾಟ್ ಹಾಗೂ 2 ಎಚ್‌ಪಿ ಸಾಮರ್ಥ್ಯವುಳ್ಳ ಮೇವು ಕತ್ತರಿಸುವ ಯಂತ್ರವನ್ನು ಹತ್ತು ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಹಸು, ಎಮ್ಮೆ, ಎತ್ತು ಸೇರಿದಂತೆ ಒಟ್ಟು 77, 694 ಜಾನುವಾರುಗಳಿದ್ದು ಅವುಗಳ ಆರೋಗ್ಯ ಸುಧಾರಣೆಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ಹಾಗೂ ಕಾಲ ಕಾಲಕ್ಕೆ ಜಾನುವಾರುಗಳಲ್ಲಿ ಕಂಡುಬರುವ ರೋಗಗಳನ್ನು ತಡೆಗಟ್ಟಲು ಎರಡು ಹಂತದಲ್ಲಿ ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪರ್ವತಯ್ಯ, ಪುರಸಭೆ ಮಾಜಿ ಸದಸ್ಯ ಮಂಜುನಾಥ್, ಪಶುವೈದ್ಯರಾದ ಡಾ ಹರ್ಷ. ಡಾ,ರವಿ. ಡಾ.ಜಗದೀಶ್. ಡಾ.ಬಾನುಪ್ರಕಾಶ್ ಇದ್ದರು.