ಭತ್ತದ ಬೆಳೆಗಾರರ ರಕ್ಷಣೆಗೆ ಸರ್ಕಾರ ಧಾವಿಸಲಿ

ತಿ.ನರಸೀಪುರ ತಾಲೂಕಿನ ಅತ್ತಹಳ್ಳಿ ಗ್ರಾಮದ ರೈತ ಜಮೀನಿನಲ್ಲಿ ಬೆಳೆದ ಭತ್ತ ನುಸಿ ಮತ್ತು ಬೆಂಕಿ ರೋಗದಿಂದ ಹಾಳಾಗಿರುವುದು.
ತಿ.ನರಸೀಪುರ ತಾಲೂಕಿನ ಅತ್ತಹಳ್ಳಿ ಗ್ರಾಮದ ರೈತ ಜಮೀನಿನಲ್ಲಿ ಬೆಳೆದ ಭತ್ತ ನುಸಿ ಮತ್ತು ಬೆಂಕಿ ರೋಗದಿಂದ ಹಾಳಾಗಿರುವುದು.
Published on

ತಿ.ನರಸೀಪುರ: ಉತ್ತಮ ಮುಂಗಾರಿನಿಂದಾಗಿ ಈ ಬಾರಿ ತಾಲೂಕಿನಲ್ಲಿ ರೈತರು ಭತ್ತದ ಬೆಳೆಯನ್ನು ಹೆಚ್ಚು ಬೆಳೆದಿದ್ದು, ಭತ್ತಕ್ಕೆ ಅಲ್ಲಲ್ಲಿ ನುಸಿ ಮತ್ತು ಬೆಂಕಿ ರೋಗ ಕಾಣಿಸಿಕೊಂಡಿದೆ. ಹೀಗಾಗಿ ಸರ್ಕಾರ ಭತ್ತದ ಬೆಳೆಗಾರರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಮಳೆ ಬಾರದೆ ಭೀಕರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ನಡುವೆ ನೀರು ಇಲ್ಲದ ಕಾರಣ ಬೆಳೆ ಬೆಳೆಯದೆ ಜೀವನ ನಡೆಸಲು ತೊಂದರೆ ಅನುಭವಿಸಿದ್ದರು. ಈ ಬಾರಿ ಉತ್ತಮ ಮಳೆಯಿಂದಾಗಿ ಅಧಿಕ ಪ್ರಮಾಣದಲ್ಲಿ ಭತ್ತದ ಬೆಳೆ ಬೆಳೆದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ತಾಲೂಕಿನ ಅತ್ತಹಳ್ಳಿ ಗ್ರಾಮದಲ್ಲಿ ರೈತರೊಬ್ಬರು 2 ಎಕರೆಯಲ್ಲಿ ಬೆಳೆದಿರುವ ಭತ್ತಕ್ಕೆ ನುಸಿ ಮತ್ತು ಬೆಂಕಿ ರೋಗ ತಗುಲಿದೆ ಎಂದು ರೈತ ಮುಖಂಡ ಬನ್ನೂರು ಸೂರಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ: ರೈತರು ಬಿತ್ತನೆ ಮತ್ತು ನಾಟಿ ಮಾಡುವ ಸಮಯದಲ್ಲಿ ರೈತರಿಗೆ ರಸಗೊಬ್ಬರ ಬಳಕೆ ಹಾಗೂ ಕೀಟ ಮತ್ತು ಕ್ರಿಮಿನಾಶಕ ಬಳಕೆ ಮಾಡುವ ಕುರಿತು ಮಾಹಿತಿ ನೀಡದ ಕಾರಣ ಇಂತಹ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಅಲ್ಲದೆ ಕೃಷಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಬನ್ನೂರು ಸೂರಿ ತಿಳಿಸಿದ್ದಾರೆ. ತುರ್ತಾಗಿ ರೈತರ ರಕ್ಷಣೆಗೆ ತಾಲೂಕು ಆಡಳಿತ ಮುಂದಾಗಿ ಬೆಳೆ ನಷ್ಟ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತುರ್ತಾಗಿ ಜಂಟಿ ಸಮೀಕ್ಷೆ ನಡೆಸಿ ರೋಗ ನಿಯಂತ್ರಣ ಮಾಡಲು ಕ್ರಮ ಕೈಗೊಂಡು, ಬೆಳೆ ನಷ್ಟ ಹೊಂದಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net