

ಸಾಗರ: ವಸ್ತುನಿಷ್ಠ ವರದಿ ಮೂಲಕ ಸಮಾಜದ ಕಣ್ಣು ತೆರೆಸುವ ಪ್ರಯತ್ನವನ್ನು ಪತ್ರಕರ್ತರು ಪ್ರಾಮಾಣಿಕವಾಗಿ ಮಾಡುತ್ತಿದ್ದು ಅವರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸ್ತ್ರೀಶಕ್ತಿ ಸಭಾಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರು, ಪತ್ರಿಕಾ ವಿತರಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜತೆಗೆ ಪತ್ರಿಕಾರಂಗ ಸಹ ಸಮಾಜದ ನಾಲ್ಕನೇ ಪ್ರಮುಖ ಅಂಗವಾಗಿ ಗುರುತಿಸಿಕೊಂಡಿದೆ. ನನ್ನನ್ನು ಸೇರಿದಂತೆ ಯಾರೇ ತಪ್ಪು ಮಾಡಿದರೆ ಅವರನ್ನು ಎಚ್ಚರಿಸುವ ಹರಿತವಾದ ಲೇಖನಿ ನಿಮ್ಮ ಬಳಿ ಇರುತ್ತದೆ. ನಿರ್ಭೀತ ಪತ್ರಿಕೋದ್ಯಮಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ನಿಮ್ಮನ್ನು ಯಾರೇ ಹೆದರಿಸುವ ಪ್ರಯತ್ನ ನಡೆಸಿದರೆ ನನ್ನ ಗಮನಕ್ಕೆ ತನ್ನಿ ಎಂದರು.
ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಪತ್ರಕರ್ತರಿಗೆ ಬಸ್ ಪಾಸ್, ಉಚಿತ ಆರೋಗ್ಯ ವಿಮೆ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು.
ಹಿರಿಯ ಪತ್ರಕರ್ತರಾದ ಟಿ.ಎಂ.ಶಿವಕುಮಾರ್ ಗೌಡ, ರಾಘವೇಂದ್ರ ಶರ್ಮ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೀಪಕ್ ಸಾಗರ್, ಪತ್ರಿಕಾ ವಿತರಕ ಅಬ್ದುಲ್ ಬಶೀರ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂತೋಷಕುಮಾರ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ.ಅರುಣ್, ಸೋಮನಾಥ್, ತಾಲೂಕು ಸಂಘದ ಉಪಾಧ್ಯಕ್ಷ ಲೋಕೇಶ ಕುಮಾರ್, ಎಂ.ಜಿ.ರಾಘವನ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ ಇತರರಿದ್ದರು.