ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ: ಯಡಿಯೂರಪ್ಪ

mysore
Published on

ಮೈಸೂರು: ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸ್ಪಂದಿಸುವ ರೀತಿಯಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಟಿ ಬೀಸಿದರು.


ಜಿಲ್ಲೆಯ ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.


ಬರಗಾಲದಿಂದ ಶೇ.25 ಬೆಳೆ ಸಹ ರೈತರ ಕೈಗೆ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕೆರೆ-ಕಟ್ಟೆಗಳು, ಜಲಾಶಯಗಳು ಖಾಲಿ ಆಗಿವೆ. ನೀರಿಗೆ ಹಾಹಾಕಾರ ಉಂಟಾಗುವ ಸಂಭವವಿದೆ. ಕೊಳವೆಬಾವಿ ಕೊರೆದರೂ ನೀರು ಸಿಗದಂತಹ ಸ್ಥಿತಿಯಿದೆ. ಈಗಾಗಲೇ ಬಿಸಿಲಿನ ಝಳ ಹೆಚ್ಚಾಗಿದೆ. ಇಂತಹ ಕಷ್ಟಕಾಲದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಸಹಕಾರದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕೆ ಸರ್ಕಾರ ಸಹ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.


ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ನೀಡುತ್ತಿದ್ದ 6 ಸಾವಿರ ರೂ. ಜತೆಗೆ ನಾನು ಸಿಎಂ ಆಗಿದ್ದಾಗ ರಾಜ್ಯ ಸರ್ಕಾರದಿಂದ 4 ಸಾವಿರ ರೂ. ಸೇರಿಸಿ ರೈತರಿಗೆ ನೀಡಲಾಗುತ್ತಿತ್ತು. ಆದರೀಗ ಹೆಚ್ಚುವರಿ 4 ಸಾವಿರ ರೂ. ನೀಡುವುದನ್ನು ಈಗಿನ ಸರ್ಕಾರ ಸ್ಥಗಿತಗೊಳಿಸಿದೆ. ಇದು ಖಂಡನೀಯ. ಕೃಷಿಕರ ಸಂಕಷ್ಟದ ಸಂದರ್ಭದಲ್ಲಿ ಹೆಚ್ಚುವರಿ 4 ಸಾವಿರ ರೂ. ನೀಡುವ ಪ್ರಕ್ರಿಯೆಗೆ ಮರು ಚಾಲನೆ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.


ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಕೃಷಿಕರ ಸಮಸ್ಯೆ ಪರಿಹರಿಸಲು ಮುಂದಾಗುತ್ತೇನೆ. ನನಗೆ ಈಗ 90 ವರ್ಷ. ಆದರೂ ಪ್ರವಾಸ ಮಾಡಿ ಜನ, ರೈತರ ಸಮಸ್ಯೆ ಆಲಿಸುವೆ. ಈ ಮೂಲಕ ಕಷ್ಟಕಾಲದಲ್ಲಿ ಅವರೊಂದಿಗೆ ನಿಲ್ಲುತ್ತೇನೆ ಎಂದು ಹೇಳಿದರು.


29 ರೂ.ಗೆ ಒಂದು ಕೆಜಿ ಅಕ್ಕಿ ನೀಡುವ ಭಾರತ್ ಬ್ರಾೃಂಡ್ ಅಕ್ಕಿ ಯೋಜನೆ ಜಾರಿ ಮಾಡಿರುವುದು ಐತಿಹಾಸಿಕ ತೀರ್ಮಾನ. ಬಡಜನರಿಗೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಈ ಯೋಜನೆ ಉತ್ತಮವಾಗಿದೆ. ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಪ್ರತಿ ಕೆಜಿ ಕಡ್ಲೆಬೇಳೆಗೆ 60 ರೂ., ಗೋಧಿ ಹಿಟ್ಟು 27.50 ರೂ., ದಾಲ್‌ಗೆ 93 ರೂ. ಬೆಲೆ ನಿಗದಿಪಡಿಸಿ ನೀಡಲಾಗುತ್ತದೆ ಎಂದು ಹೇಳಿದರು.


ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರವಣಬೆಳಗೊಳ ಜೈನ ಮಠದ ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ಎಂಎಲ್‌ಸಿ ದಿನೇಶ್ ಗೂಳಿಗೌಡ, ಮಾಜಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಮುರುಗೇಶ್ ಆರ್.ನಿರಾಣಿ, ಶಾಸಕರಾದ ಟಿ.ಎಸ್.ಶ್ರೀವತ್ಸ, ಎ.ಮಂಜು ಇನ್ನಿತರರು ಪಾಲ್ಗೊಂಡಿದ್ದರು.

ಜೈ ಶ್ರೀರಾಮ ಎಂದು ಯಡಿಯೂರಪ್ಪ ಘೋಷಣೆ

ಮೊದಲು ಜೈ ಶ್ರೀರಾಮ ಎಂದು ಬಿ.ಎಸ್.ಯಡಿಯೂರಪ್ಪ ಘೋಷಣೆ ಕೂಗಿದಾಗ ಸಭಿಕರಿಂದ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ನಾನು ‘ಜೈ ಶ್ರೀರಾಮ’ ಎಂದು ಹೇಳುವೆ. ಅದಕ್ಕೆ ಪ್ರತಿಯಾಗಿ ‘ಜೈ ಜೈ ಜೈ ಶ್ರೀರಾಮ’ ಎಂದು ಘೋಷಣೆ ಕೂಗಬೇಕು ಎಂದರು. ಬಳಿಕ ಅದೇ ರೀತಿ ಸಭಿಕರಿಂದ ಜೈ ಶ್ರೀರಾಮ ಜೈಕಾರ ಮೊಳಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net