

ಅರಕಲಗೂಡು: ಅರಕಲಗೂಡು ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಸರ್ಕಾರ ನೀಡುವ ಪರಿಹಾರ ಎಲ್ಲ ರೈತರಿಗೂ ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಶಾಸಕ ಎ.ಮಂಜು ಸೂಚಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಎ.ಮಂಜು, ಸರ್ಕಾರ ಮುಂದಿನ ದಿನಗಳಲ್ಲಿ ಬರ ನಿರ್ವಹಣೆ ಕುರಿತು ಮಾರ್ಗಸೂಚಿ ಹಾಗೂ ಅನುದಾನವನ್ನು ಬಿಡುಗಡೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಸಿದ್ದತೆ ನಡೆಯಬೇಕು. ಪ್ರಮುಖವಾಗಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಹೊಸದಾಗಿ ಕೊಳವೆ ಬಾವಿ ಕೊರೆಸುವ ಹಾಗೂ ದುಸ್ಥಿತಿಯಲ್ಲಿರುವ ಕೊಳವೆ ಬಾವಿಗಳ ದುರಸ್ತಿ ಸೇರಿದಂತೆ ಜಾನುವಾರುಗಳ ಮೇವಿನ ಕೊರತೆ ನೀಗಿಸಯವ ನಿಟ್ಟಿನಲ್ಲಿ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನಲ್ಲಿ ಮಳೆ ಕೊರತೆ ಹಾಗೂ ರೈತರ ಸಂಕಷ್ಟ ಕುರಿತು ಅಧಿಕಾರಿಗಳು ನೀಡಿದ ಉತ್ತಮ ವರದಿ ಸರ್ಕಾರದ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ತಾಲೂಕು ತೀವ್ರ ಬರಪೀಡಿತ ಎಂದು ಘೋಷಣೆಯಾಗಿದೆ ಅಧಿಕಾರಿಗಳ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರದ ಅನುದಾನ ದೊರೆತ ಬಳಿಕ ಮುಂದಿನ ಸಭೆ ನಡೆಸಿ, ಪರಿಹಾರ ಕಾಮಗಾರಿ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್, ಸಹಾಯಕ ಕೃಷಿ ನಿರ್ದೇಶಕ ರಮೇಶ್‌ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.