

ಶಿರೋಳ: ಹಿಂದುಳಿದವರ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಮೊದಲು ಧ್ವನಿ ಎತ್ತಿದ ದಿಟ್ಟ ಮಹಿಳೆಯರಾದ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ಇಂದಿನ ಮಹಿಳೆಯರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅವರಂತೆಯೆ ಎಲ್ಲ ಮಹಿಳೆಯರು ಧೈರ್ಯದಿಂದ ಅನ್ಯಾಯ ಎದುರಿಸಿ ಸಶಕ್ತರಾಗಿ ಬದುಕಬೇಕು ಎಂದು ಶಿರೋಳ ಹಾಗೂ ಭೈರನಹಟ್ಟಿ ಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಸ್ಥಳೀಯ ಗುರುಬಸವ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತ್ಸುತ್ಸವ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಮೂಢ ನಂಬಿಕೆ ಬೇರೂರಿದ್ದ ಕಾಲದಲ್ಲಿ ಅದರ ವಿರುದ್ಧ ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ಫುಲೆಯವರ ಇತಿಹಾಸ ಎಲ್ಲರೂ ಅರಿಯಬೇಕು. 12ನೇ ಶತಮಾನದ ಬಸವಾದಿ ಶಿವಶರಣರ ಕನಸು ನನಸಾಗಿಸುವಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವಿರತವಾಗಿ ಶ್ರಮಿಸಿದ್ದಾರೆ. ಹೀಗಾಗಿ ಅವರ ಜಯಂತಿಯನ್ನು ಸರ್ಕಾರ ಅಧಿಕೃತವಾಗಿ ಘೊಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯ ಶಿಕ್ಷಕಿ ಶಿವಲೀಲಾ ವಸ್ತ್ರದ ಮಾತನಾಡಿ, ಸಮಾಜದ ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರ ಸಮಾನತೆಯ ಹಕ್ಕಿಗಾಗಿ ಶ್ರಮಿಸಿದ ಅವರ ಜೀವನವೇ ನಮಗೆ ಆದರ್ಶನೀಯ. ಸತಿ ಸಹಗಮನ ಪದ್ಧತಿಯನ್ನು ಬಲವಾಗಿ ವಿರೋಧಿಸಿದ್ದ ಸಾವಿತ್ರಿಬಾಯಿ ಅವರು ಈ ದೇಶ ಕಂಡ ದಿಟ್ಟ ಮಹಿಳೆ ಎಂದು ಬಣ್ಣಿಸಿದರು.
ಸಯ್ಯದದಮೀನ್ ಎಸ್. ದೊಡಮನಿ, ಎಸ್.ಎಂ. ಗಿರಿಯಪ್ಪಗೌಡ್ರ, ರೇಣುಕಾ ಚವ್ಹಾಣ, ಸರಸ್ವತಿ ಗಾಣಿಗೇರ, ಪೂರ್ಣಿಮಾ ಎಸ್. ಅಂಗಡಿ, ಜಗದೀಶ ಬಣ್ಣಗಿಡದ, ಗಂಗಾಧರ ಎಸ್. ಶಿರೋಳ, ಆಯ್.ಎಸ್. ಬಡಿಗೇರ, ಇತರರು ಉಪಸ್ಥಿತರಿದ್ದರು.