ಸರ್ಕಾರ ಅರಸು ಹಾದಿಯಲ್ಲಿ ಸಾಗಲಿ: ಎಂ.ಸಿ.ನಾಣಯ್ಯ

21adarshkdga1
Published on

ಮಡಿಕೇರಿ: ಸಾಮಾಜಿಕ ಪರಿವರ್ತಕ ಹಾಗೂ ಅಭಿವೃದ್ಧಿಯ ಹರಿಕಾರ ಡಿ.ದೇವರಾಜ ಅರಸು ಕಾಲದ ನಂತರ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಾಖಲೆಯ ೧೩೫ ಸ್ಥಾನಗಳಲ್ಲಿ ಗೆಲವು ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದು, ಅರಸರ ಹಾದಿಯಲ್ಲಿ ಈಗಿನ ಸರ್ಕಾರ ಸಾಗದಿದ್ದಲ್ಲಿ ಪರಿಣಾಮ ಕಷ್ಟವಾಗಬಹುದು ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿದರು.


ಕೊಡಗು ಜಿಲ್ಲಾ ಅಹಿಂದ ಒಕ್ಕೂಟ ಹಾಗೂ ಸಹಮತ ವೇದಿಕೆ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಿ.ದೇವರಾಜ ಅರಸರ ೧೦೮ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


೧೯೭೨ರಲ್ಲಿ ೨೧೬ ವಿಧಾನಸಭಾ ಕ್ಷೇತ್ರಗಳಲ್ಲಿ ೧೬೫ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೇವರಾಜ ಅರಸು ಅವರು ಇತಿಹಾಸ ಸೃಷ್ಟಿಸಿದರು. ಇದೀಗ ಕರ್ನಾಟಕದಲ್ಲಿ ಎರಡನೇ ಇತಿಹಾಸ ಸೃಷ್ಟಿಯಾಗಿದ್ದು, ಕಾಂಗ್ರೆಸ್ ಪಕ್ಷ ೧೩೫ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಧಾನಿ ನರೇಂದ್ರಮೋದಿರವರು ರಾಜ್ಯದೆಲ್ಲೆಡೆ ೨೬ ದಿನಗಳ ಕಾಲ ಪ್ರವಾಸ ಕೈಗೊಂಡು ೩೬ ಸಭೆಗಳನ್ನು ನಡೆಸಿದರು. ಆದರೆ ಮೌನವಾಗಿಯೇ ಇದ್ದ ಮತದಾರ ಬದಲಾವಣೆಯನ್ನು ಬಯಸಿ ಕಾಂಗ್ರೆಸ್‌ಗೆ ೧೩೫ ಸ್ಥಾನಗಳನ್ನು ತಂದು ಕೊಟ್ಟಿದ್ದಾರೆ. ಇದು ಎರಡನೇ ದಾಖಲೆಯಾಗಿದ್ದು, ಇದೀಗ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ದೇವರಾಜ ಅರಸು ಅವರ ಹಾದಿಯಲ್ಲೇ ಸಾಗಬೇಕು. ಜನರು ಕೂಡ ಇದನ್ನೇ ನಿರೀಕ್ಷೆ ಮಾಡುತ್ತಿದ್ದಾರೆ. ಸರ್ಕಾರ ಬೇರೆ ಹಾದಿ ಹಿಡಿದರೆ ಪರಿಣಾಮ ಕ?್ಟವಾಗಬಹುದು ಎಂದು ನಾಣ್ಯಯ್ಯ ಅಭಿಪ್ರಾಯಪಟ್ಟರು.


ದೇವರಾಜ ಅರಸುರವರು ನನ್ನ ರಾಜಕೀಯ ಗುರು, ನನ್ನನ್ನು ಒತ್ತಾಯ ಮಾಡಿ ಚುನಾವಣೆಗೆ ನಿಲ್ಲಿಸಿದ ಪರಿಣಾಮ ನಾನು ವಿಧಾನಸಭೆ ಪ್ರವೇಶಿಸುವಂತಾಯ್ತು. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಜನಸಾಮಾನ್ಯರು ವಿಧಾನಸಭೆ ಪ್ರವೇಶಿಸಲಾಗದ ಕಾಲಘಟ್ಟದಲ್ಲಿ ಅರಸು ಅವರು ರಾಜ್ಯದ ೨೧೬ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷ ಸಂಘಟಿಸುವ ಮೂಲಕ ಹೊಸ ರಾಜಕೀಯ ಮುಖಂಡರುಗಳಿಗೆ ಹಾಗೂ ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ವಿಧಾನಸಭೆ ಪ್ರವೇಶಿಸುವಂತೆ ಮಾಡಿದರು ಎಂದು ನೆನಪಿಸಿಕೊಂಡರು.


ಭೂ ಸುಧಾರಣಾ ಕಾಯ್ದೆಯ ಮೂಲಕ ಬಡವರಿಗೆ ನ್ಯಾಯ ಒದಗಿಸಿದ ಅರಸು ಅವರು ಕಾಫಿ, ಕಿತ್ತಳೆ, ಕಾಳುಮೆಣಸು ರಬ್ಬರ್ ತೋಟದ ಬೆಳೆಗಾರರಿಗೆ ಕಾಯ್ದೆಯಿಂದ ವಿನಾಯಿತಿ ನೀಡಿದರು. ಇದರ ಪರಿಣಾಮ ಇಂದಿಗೂ ಕಾಫಿ ಬೆಳೆಗಾರರು ನೆಮ್ಮದಿಯಿಂದ ಇದ್ದಾರೆ ಎಂದರು.


ಜಿಲ್ಲೆಯಲ್ಲಿ ಇಂದು ಕೃಷಿಭೂಮಿ ಕೃಷಿಯೇತರವಾಗಿ ಪರಿವರ್ತನೆಯಾಗುತ್ತಿದೆ. ಹಿಂದೆ ಕಂದಾಯ ಸಚಿವರಾಗಿದ್ದ ಆರ್.ಅಶೋಕ್‌ರವರು ಭೂ ಪರಿವರ್ತನಾ ಕಾಯ್ದೆಯನ್ನು ಸಡಿಲಿಸಿದ ಪರಿಣಾಮ ಹೆಚ್ಚು ಹೆಚ್ಚು ಕೃಷಿಭೂಮಿ ಕೃಷಿಯೇತರವಾಗಿ ಪರಿವರ್ತನೆಯಾಗುತ್ತಿದೆ. ಎಲ್ಲೆಂದರಲ್ಲಿ ಬೆಟ್ಟಗುಡ್ಡಗಳನ್ನು ಅಗೆದು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ೨೦೧೮ ರ ಮಳೆಗಾಲದಲ್ಲಿ ಇದರ ಪರಿಣಾಮವನ್ನು ಎದುರಿಸಿದ್ದೇವೆ. ಈ ಬೆಳವಣಿಗೆ ಅಪಾಯಕಾರಿಯಾಗಿದೆ ಎಂದು ನಾಣಯ್ಯ ಆತಂಕ ವ್ಯಕ್ತಪಡಿಸಿದರು.


ದೇವರಾಜ ಅರಸು ಅವರ ಹುಟ್ಟಿದ ಮನೆ ಮತ್ತು ಸಮಾಧಿಯನ್ನು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಸ್ಫೂರ್ತಿಯ ಕ್ಷೇತ್ರವನ್ನಾಗಿಸಬೇಕು. ಈಗಿನ ಕಾಂಗ್ರೆಸ್ ಸರ್ಕಾರ ದೊಡ್ಡ ಮಟ್ಟದಲ್ಲಿ ಸ್ಮಾರಕವನ್ನು ಅಭಿವೃದ್ಧಿಪಡಿಸಿ ಅರಸುರವರು ಯುವ ಜನಾಂಗಕ್ಕೆ ಮಾದರಿಯಾಗುವಂತೆ ನೋಡಿಕೊಳ್ಳಬೇಕು. ಆ ಮೂಲಕ ಅರಸು ಹೆಸರು ಅಮರವಾಗಬೇಕು ಎಂದರು.


ಸಹಮತ ವೇದಿಕೆಯ ಅಧ್ಯಕ್ಷ ಹಾಗೂ ಅಹಿಂದ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ದೇವರಾಜ ಅರಸುರವರು ಸಾಮಾಜಿಕ ನ್ಯಾಯವನ್ನು ನೀಡಿದರು, ಸಿದ್ಧಾಂತ ಮತ್ತು ಮೌಲ್ಯ ಇದ್ದರೆ ಮಾತ್ರ ಜನಸಾಮಾನ್ಯರಿಗೆ ಸಹಾಯ ಮಾಡಲು ಸಾಧ್ಯ. ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಈ ರಾಷ್ಟ್ರ ನಿರ್ಮಾಣಗೊಂಡಿದ್ದು, ಮೇಲು, ಕೀಳು ಎನ್ನುವ ಮನೋಭಾವನೆಯಿಂದ ದೂರ ಉಳಿದು ನಾವೆಲ್ಲರೂ ಭಾರತೀಯರು ಎಂದು ಒಗ್ಗಟ್ಟಿನಿಂದ ಬದುಕಿದರೆ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ. ದೇವರಾಜು ಅರಸು ಅವರು ಸಾಮಾಜಿಕ ನ್ಯಾಯ ನೀಡಿದ ಕಾರಣ ಇಂದಿಗೂ ಅವರ ಹೆಸರು ಚಿರವಾಗಿದೆ. ಸಂಘರ್ಷವನ್ನು ಬಿಟ್ಟು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ ಅವರು ದುರ್ಬಲರ ಶಕ್ತಿಯಾಗಿದ್ದರು. ಸಂಘರ್ಷದಿಂದ ನ್ಯಾಯ ಸಿಗಲು ಸಾಧ್ಯವಿಲ್ಲ, ಪ್ರತಿಯೊಬ್ಬರು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ದೇವರಾಜ ಅರಸು ಅವರ ವಿಚಾರಧಾರೆಗಳನ್ನು ಪ್ರತಿಪಾದಿಸಬೇಕು ಎಂದು ರಮೇಶ್ ಕರೆ ನೀಡಿದರು.


ಸಹಮತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ, ಕಾರ್ಯಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು, ಪ್ರಮುಖ ಲಿಯಾಕತ್ ಆಲಿ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ
ಮಹಿಳೋದಯ ಮಹಿಳಾ ಒಕ್ಕೂಟದ ಸಂಯೋಜಕಿ ಜಾಯ್ಸ ಮೆನೇಜಸ್, ತನಲ್ ವೃದ್ಧಾಶ್ರಮದ ಮೇಲ್ವಿಚಾರಕಿ ಬಿ.ಕೆ.ಶಶಿಕಲಾ, ಕೂರ್ಗ್ ಬ್ಲಡ್ ಫೌಂಡೇಶನ್ ನ ಪದಾಧಿಕಾರಿ ಎಂ.ಸಮೀರ್ ಹಾಗೂ ಸಮಾಜ ಸೇವಕ ಬಾಬುಚಂದ್ರ ಉಳ್ಳಾಗಡ್ಡಿ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net