ಸರ್ಕಾರ ಕನ್ನಡ ಕಲಿಕೆ ಕಡ್ಡಾಯಗೊಳಿಸಲಿ

Let the government make learning Kannada compulsory
ಜಮಖಂಡಿ ನಗರದ ಬಸವ ಭವನದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ನಾಡೋಜ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ವೇದಾಂತಾಚಾರ್ಯ ಸಹಜಾನಂದ ಅವಧೂತರು, ಕೃಷ್ಣಾನಂದ ಶ್ರೀಗಳು, ಜಿ.ಎಸ್.ನ್ಯಾಮಗೌಡ, ಡಾ. ವಿಜಯಲಕ್ಷ್ಮೀ ತುಂಗಳ, ಡಾ. ಉಮೇಶ ಮಹಾಬಳಶೆಟ್ಟಿ ಇತರರಿದ್ದರು.
Published on

ಜಮಖಂಡಿ (ಸಿದ್ಧೇಶ್ವರ ಮಹಾಸ್ವಾಮಿಗಳ ಪ್ರಧಾನ ವೇದಿಕೆ): ಕನ್ನಡ ಭಾಷೆ ಉಳಿವಿಗಾಗಿ ಗೋಷ್ಠಿಗಳು, ಚಿಂತನ, ಮಂಥನ, ವಿಚಾರ ಸಂಕಿರಣ, ಚರ್ಚೆಗಳು ನಡೆಯಬೇಕು. ಕಡ್ಡಾಯವಾಗಿ ಕನ್ನಡ ಕಲಿಸಬೇಕೆಂದು ಸರ್ಕಾರ ಆದೇಶ ಹೊರಡಿಸಬೇಕೆಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ನಗರದ ಬಸವ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಘಟಕ, ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ಭಾನುವಾರ ನಡೆದ ಜಮಖಂಡಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನಿಷ್ಠ ಪಕ್ಷ 1ನೇ ತರಗತಿಯಿಂದ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆಯಬೇಕು. ನಿರ್ಣಯದಂತೆ ಅನುಷ್ಠಾನವಾಗಬೇಕು. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ನೃತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕೇರಳ ರಾಜ್ಯದಂತೆ ಶೇ.100 ರಷ್ಟು ಸಾಕ್ಷರತೆ ಪ್ರಮಾಣ ಕರ್ನಾಟಕಲ್ಲೂ ಆಗುವಂತೆ ಸರ್ಕಾರ, ಸಂಘ-ಸಂಸ್ಥೆಗಳು ಮುತುವರ್ಜಿ ವಹಿಸಬೇಕು ಎಂದರು.

ಜಮಖಂಡಿ ಸಾಂಸ್ಕೃತಿಕ, ಸಾಮಾಜಿಕ, ಕಲೆ, ಕ್ರೀಡೆಗೆ ಹೆಸರುವಾಸಿಯಾಗಿದೆ. ಕನ್ನಡ ಭಾಷೆ ನಮ್ಮ ಸಂಸ್ಕೃತಿಯಾಗಿದೆ. ಕನ್ನಡ ಭಾಷೆ ವ್ಯವಹಾರಿಕ ಭಾಷೆಯಾಗಬೇಕೆಂದು ಒತ್ತಾಯಿಸಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಭಾಷೆ ಉಳಿಸಿ ಬೆಳೆಸುವುದಕ್ಕಾಗಿ ವಲಯ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿಕೊಂಡು ಕನ್ನಡ ಭಾಷೆಗೆ ವಿಶೇಷ ಆದ್ಯತೆ ನೀಡುವ ನಿಟ್ಟಿನಲ್ಲಿ ಸಮ್ಮೇಳನ ಮಾಡುವುದು ಅತ್ಯವಶ್ಯವಾಗಿದೆ ಎಂದರು.
ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಬಿ.ಐ. ಕಡ್ಡಿ ಮಾತನಾಡಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕ ಉಪಾಧ್ಯಕ್ಷೆ ಡಾ. ವಿಜಯಲಕ್ಷ್ಮೀ ತುಂಗಳ ಚಿತ್ರಕಲಾ ಮಳಿಗೆಗಳನ್ನು ಉದ್ಘಾಟಿಸಿದರು.
ವೇದಿಕೆ ಹತ್ತದ ಹಿರಿಯ ಸಾಹಿತಿ ತಾತಾಸಾಹೇಬ ಬಾಂಗಿ: ಹಿರಿಯ ಸಾಹಿತಿ, ನ್ಯಾಯವಾದಿ ತಾತಾಸಾಹೇಬ ಬಾಂಗಿ ಅವರನ್ನು ಸಂಘಟಕರು, ಕಸಾಪ ತಾಲೂಕು ಅಧ್ಯಕ್ಷ ಸಂತೋಷ ತಳಕೇರಿ ವೇದಿಕೆಗೆ ಬರುವಂತೆ ಕೇಳಿಕೊಂಡರೂ ಅವರು ಪ್ರೇಕ್ಷಕರ ಸಾಲಿನಲ್ಲೇ ಕುಳಿತುಕೊಂಡರು. ಸಾಹಿತಿ ಮಲ್ಲಿಕಾರ್ಜುನ ಇಂಡಿ ಸಂಪಾದಕತ್ವದಲ್ಲಿನ ಭಾವತೀರ್ಥ ಸ್ಮರಣ ಸಂಚಿಕೆ, ವಿವಿಧ ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಸಮ್ಮೇಳನಾಧ್ಯಕ್ಷ ವೇದಾಂತಾಚಾರ್ಯ ಸಹಜಾನಂದ ಅವಧೂತರು, ಕೃಷ್ಣಾನಂದ ಶ್ರೀಗಳು, ಕಾರ್ಯಾಧ್ಯಕ್ಷ, ವಿ.ಪ. ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಕೋಶಾಧ್ಯಕ್ಷ ಡಾ. ಉಮೇಶ ಮಹಾಬಳಶೆಟ್ಟಿ, ನಾಡೋಜ ಡಾ. ಎಚ್.ಜಿ. ದಡ್ಡಿ, ತಾಪಂ ಇಒ ಸಂಜೀವ ಜುನ್ನೂರ, ಟಿಎಪಿಸಿಎಂಎಸ್ ಮಾನಿಂಗ ತಳವಾರ, ಕಲಾವಿದರಾದ ಗುರುರಾಜ ಹೊಸಕೋಟಿ, ಹರೀಶ, ಕಾಡು ಮಾಳಿ, ಸುಶೀಲಕುಮಾರ ಬೆಳಗಲಿ, ದಾನೇಶ ಘಾಟಗೆ, ಅಜಯ ಕಡಪಟ್ಟಿ, ಸಿದ್ದು ಮೀಶಿ, ಈಶ್ವರ ವಾಳೆನ್ನವರ, ರಾಜೇಶ್ವರಿ ಹಿರೇಮಠ ಇತರರಿದ್ದರು.

ಶಿಕ್ಷಕಿ ಭಾರತಿ ಮದಿನವರ, ಪಿ.ಎಸ್. ಕಟ್ಟಿಮನಿ ಹಾಗೂ ಬಸಲಿಂಗಯ್ಯ ಮಠಪತಿ ಸಂಗೀತ ಸೇವೆ ನೀಡಿದರು. ಶಿಕ್ಷಕಿಯರಾದ ಎನ್.ಎಲ್. ಮಿರ್ಜಿ, ಸುಮಲತಾ ಕಾಂಬಳೆ, ಉಮಾ ಹಿರೇಮಠ, ವನಜಾ ಇದ್ದಲಗಿ, ಅಂಜನಾ ನವನಿ, ಜಿ.ವಿ.ದಿಕ್ಷೀತ ನಾಡಗೀತೆ ಹಾಗೂ ರೈತಗೀತೆ ಹಾಡಿದರು.
ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಆಶಯ ನುಡಿ ಹೇಳಿದರು. ಎನ್.ಬಿ. ಮಾಲಗಾರ ಹಾಗೂ ಸರಿತಾ ಶಿರಗುಪ್ಪಿ ನಿರೂಪಿಸಿದರು. ಶಿಕ್ಷಕಿ ಚಂದ್ರಕಲಾ ಜನಗೌಡ ವಂದಿಸಿದರು.

ಜನಪ್ರತಿನಿಧಿಗಳ ಅನುಪಸ್ಥಿತಿ: ಸಮ್ಮೇಳನದಲ್ಲಿ ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ನಗರ ತುಂಬ ಹಾಕಿದ ಬ್ಯಾನರ್‌ಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರಲ್ಲದ ಭಾವಚಿತ್ರ ಹಾಕಿ ಸಮ್ಮೇಳನ ಮಾಡಲು ಹೊರಟ ಸಂಘಟಕರಿಗೆ ನಿರೀಕ್ಷೆಯಂತೆ ಶಿಕ್ಷಕರು, ಸಾಹಿತ್ಯಾಸಕ್ತರು, ಜನಪ್ರತಿನಿಧಿಗಳು ಪಾಲ್ಗೊಳ್ಳದಿರುವುದು ನಿರಾಸೆ ಮೂಡಿಸಿತು. ಪುಸ್ತಕ, ಖಾದಿ ಬಟ್ಟೆ ಸೇರಿ ವಿವಿಧ ಮಳಿಗೆಗಳಲ್ಲಿ ಸಾಹಿತ್ಯಾಸಕ್ತರು ಪುಸ್ತಕಗಳನ್ನು ಖರೀದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net