

ಎನ್.ಆರ್.ಪುರ: ಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನದ ಸಮಗ್ರ ಅನುಷ್ಠಾನವೇ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಮುಖ್ಯ ಉದ್ದೇಶ ಎಂದು ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಹಾಗೂ ಕಡಹಿನಬೈಲು ಗ್ರಾಪಂ ನೋಡಲ್ ಅಧಿಕಾರಿ ರಮೇಶ್ ಹೇಳಿದರು.
ಕಡಹಿನಬೈಲು ಗ್ರಾಪಂನಲ್ಲಿ ಸೋಮವಾರ ನಡೆದ 2023-24 ನೇ ಸಾಲಿನ ಸಾಮಾಜಿಕ ಪರಿಶೋಧನಾ ಸಭೆಯಲ್ಲಿ ಮಾತನಾಡಿ, ಗ್ರಾಮಸ್ಥರಿಗೆ ಗ್ರಾಮಸಭೆ ಎಂದಾಕ್ಷಣ ಸಾಮಾನ್ಯ ಗ್ರಾಮಸಭೆ ಎಂದು ಭಾವಿಸಿ ಅವರ ಸಮಸ್ಯೆಗಳನ್ನು ಚರ್ಚಿಸಲು ಬರುತ್ತಾರೆ. ಆದರೆ ಗ್ರಾಪಂ ಅಧಿಕಾರದ ವ್ಯಾಪ್ತಿಯಲ್ಲಿ ಅನೇಕ ವಿಷಯಗಳಿಗೆ ಸಂಬಂಧಪಟ್ಟಂತೆ ಗ್ರಾಮ ಸಭೆಗಳು ನಡೆಯುತ್ತವೆ. ಆಯಾಯ ವಿಷಯ, ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾತ್ರ ಚರ್ಚೆ, ತೀರ್ಮಾನಗಳ ನಡಾವಳಿಯಾಗುತ್ತವೆ. ಎಲ್ಲ ಜನರು ಸರ್ಕಾರದ ವಿವಿಧ ಯೋಜನೆಗಳ ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಅದರ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಾಮಾಜಿಕ ಪರಿಶೋಧನಾ ಅನುಷ್ಠಾನಾಧಿಕಾರಿ ಸುಶ್ಮಿತಾ ಮಾತನಾಡಿ, ಈ ಬಾರಿ ಗ್ರಾಪಂ 15ನೇ ಹಣಕಾಸು ಯೋಜನೆ, ಜಿಪಂ ಹಾಗೂ ತಾಪಂ ಅನುದಾನದ ಸದ್ಬಳಕೆ ಹಾಗೂ ಕೈಗೊಂಡ ಕಾಮಗಾರಿಗಳ ಪರಿಶೋಧನೆ ಮಾಡಲಾಗುವುದು. ಗ್ರಾಮಸ್ಥರ ಮುಂದೆ ಸಮಗ್ರವಾಗಿ ಮಾಹಿತಿ ನೀಡಿ ಆಕ್ಷೇಪಣೆಗಳಿದ್ದಲ್ಲಿ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪಾರದರ್ಶಕ ಆಡಳಿತ ನಡೆಸಲು ಪರಿಶೋಧನಾ ಸಭೆ ನಡೆಸಲಾಗುತ್ತದೆ. ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡ ಕೆಲವು ಕಾಮಗಾರಿಗಳ ಸ್ಥಳಗಳಲ್ಲಿ ನಾಮಫಲಕಗಳನ್ನು ಅಳವಡಿಸಿಲ್ಲ. ಕೂಡಲೇ ಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಕೆಲ ಗ್ರಾಮಸ್ಥರು ಬೀದಿ ದೀಪದ ನಿರ್ವಹಣೆ ಹಾಗೂ ಕುಡಿಯುವ ನೀರಿನ ಕಾಮಗಾರಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಗ್ರಾಪಂನಲ್ಲಿ ಎಲ್ಲಿಯೂ ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಎಲ್ಲ ಯೋಜನೆಯ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ ಎಂದರು.
ಜೆಜೆಎಂ ಹಾಗೂ ಸ್ವಚ್ಛ ಭಾರತ್ ಮಿಷನ್ ಸಮುದಾಯ ಸಂಘಟಕರಾದ ನಾಗೇಶ್ ಹಾಗೂ ರಿಜ್ಞಾ ಮಳೆ ನೀರು ಕೊಯ್ಲು ಹಾಗೂ ಬೂದು ನೀರು ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್, ಸದಸ್ಯರಾದ ಚಂದ್ರಶೇಖರ್, ರವೀಂದ್ರ, ಅಶ್ವಿನಿ, ವಾಣಿ ನರೇಂದ್ರ, ಪೂರ್ಣಿಮಾ, ಲಿಲ್ಲಿಮಾತು ಕುಟ್ಟಿ, ಪಿಡಿಒ ವಿಂದ್ಯಾ, ಆರ್.ರಂಜಿತಾ, ತೇಜಸ್ವಿನಿ, ನಿಷಾ, ಆನೀಸ್, ರಂಜಿತಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.