

ನರಗುಂದ: ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ. ಇದನ್ನು ಪಾಲಿಸಲು ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ತಾಲೂಕು ಡಿಎಸ್ಎಸ್ ಸಂಚಾಲಕ ದತ್ತು ಜೋಗಣ್ಣವರ ಆಗ್ರಹಿಸಿದರು.
ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಹಮ್ಮಿಕೊಂಡಿದ್ದ ಬೆಳಗಾವಿ ಚಲೋ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಆ.1ರಂದು ಸುಪ್ರೀಂ ಕೋರ್ಟ್ನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು. ತೀರ್ಪು ಬಂದು ನಾಲ್ಕು ತಿಂಗಳಾದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಕಾಟಾಚಾರಕ್ಕೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಈವರೆಗೆ ಏನನ್ನೂ ಮಾಡಿಲ್ಲ. 2 ತಿಂಗಳ ಅವಧಿಯಲ್ಲಿ ಆಯೋಗ ವರದಿ ನೀಡುತ್ತದೆ ಎಂದು ತಿಳಿಸಿತ್ತು. ಆದರೆ, ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವು ನೀಡದೆ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಮುತ್ತು ಸುರಕೋಡ ಮಾತನಾಡಿ, ಒಳಮೀಸಲಾತಿ ಆಗುವವರೆಗೂ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ, ಭರವಸೆ ಜಾರಿಯಾಗಿಲ್ಲ. ನೇಮಕಾತಿ ಘೊಷಣೆಗಳು ವಿವಿಧ ಇಲಾಖೆಯಿಂದ ಬರುತ್ತಲಿವೆ. ಸರ್ಕಾರದ ಧೋರಣೆ ಖಂಡಿಸಿ ಡಿ.16ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಕರೆ ನೀಡಲಾಗಿದೆ. ಒಳ ಮೀಸಲಾತಿಗಾಗಿ ಆಗ್ರಹಿಸಿ ನರಗುಂದದಿಂದ 2 ಸಾವಿರ ಜನ ತೆರಳಲಿದ್ದಾರೆ. ರಾಜ್ಯಾದ್ಯಂತ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ವಸಂತ ಜೋಗಣ್ಣವರ, ಮೈಲಾರಪ್ಪ ಹಿರೇಮನಿ, ಕೆಂಗಾಲಕರ, ಮರಿಯಪ್ಪ ಮಾದರ, ಅಲ್ಲಪ್ಪ ದುತ್ತರಗಿ, ಶ್ರೀನಿವಾಸ ಹೊನ್ನಿಕೇರಿ, ವೆಂಕಟೇಶ ಖಾನಪೇಠ, ರಾಜು ತೋರಗಲ್, ಈಶ್ವರ ಮಾಚಕನ್ನವರ, ಮಂಜುನಾಥ ಬಾವಲತ್ತಿ, ಕುಮಾರ ಬೆಟಗೇರಿ, ಗಣಪತಿ ದುತ್ತರಗಿ, ಪುನೀತ ಜೋಗಣ್ಣವರ, ಮುತ್ತು ಮಾದರ, ಮಾರುತಿ ಮಾದರ, ಫಕೀರಪ್ಪ ಮಾದರ, ಚುಂಚಪ್ಪ ಬೇವಿನಗಿಡದ, ಈರಪ್ಪ ಮಾದರ, ಪಿಡ್ಲಪ್ಪ ಮಾದರ, ದೇವರಾಜ ಜೋಗಣ್ಣವರ ಇತರರಿದ್ದರು.