

ಸಿದ್ದಾಪುರ: ತಾಲೂಕಿನಲ್ಲಿ ಮಳೆ ಕೊರತೆಯಿಂದ ಹೈನುಗಾರಿಕೆ ಮಾಡುವುದು ಕಷ್ಟಕರವಾಗಿದೆ. ರಾಜ್ಯ ಸರ್ಕಾರ ಹೈನುಗಾರರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕು ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ ಬೇಡ್ಕಣಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಆಯೋಜಿಸಿದ್ದ ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ಧಾರವಾಡ ಹಾಲು ಒಕ್ಕೂಟ ಹೈನು ಉತ್ಪಾದನೆಗೆ ವಿವಿಧ ರೀತಿಯ ಸಹಾಯ ಸಹಕಾರ ನೀಡುತ್ತಿದ್ದು, ಇದರ ಪ್ರಯೋಜನವನ್ನು ಹೈನುಗಾರರು ಪಡೆದುಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷ ಶ್ರೀಧರ ಎಂ.ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಜಿ. ನಾಯ್ಕ ಹುಬ್ಬಗೈ, ಡಾ. ಶ್ರೇಯಸ್ ರಾಜ್, ದಿನೇಶ ಹೆಗಡೆ, ಡಾ. ವಿವೇಕ ಹೆಗಡೆ, ಪ್ರಕಾಶ ಕೆ., ಇದ್ದರು. ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ನಿರ್ವಹಿಸಿದರು. ಪ್ರಮೋದ ಕೊಡಿಯಾ ಹೊನ್ನೆಹದ್ದ ಸಹಕರಿಸಿದರು.