ಬೆಳೆಗಳಿಗೆ ಸರ್ಕಾರ ಉತ್ತಮ ದರ ನೀಡಲಿ

21Snk1
Published on

ಸಂಕೇಶ್ವರ: ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ರೈತರು ಈಗಿನಿಂದಲೇ ಪರ್ಯಾಯ ಬೆಳೆ ಬೆಳೆಯುವತ್ತ ಗಮನ ಹರಿಸಬೇಕು ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ನಿಡಸೋಸಿ ಜಗದ್ಗುರು ದುರದುಂಡಿಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಹಾಗೂ ಬೆಳೆ ವೈವಿಧ್ಯತೆ ಯೋಜನೆ ಅಡಿ ಗುರುವಾರ ಆಯೋಜಿಸಲಾಗಿದ್ದ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.

ಸರ್ಕಾರ ಬೆಲೆ ಏರಿಕೆ ನಿಯಂತ್ರಣದ ಪರಿಣಾಮ ರೈತ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ರೈತರ ಬೆಳೆ ನೇರವಾಗಿ ಖರೀದಿಸುವತ್ತ ಸರ್ಕಾರ ಚಿಂತನೆ ನಡೆಸಿ ರೈತಕುಲದ ಸಮೃದ್ಧಿಗೆ ಸಹಕರಿಸಬೇಕು. ಇತ್ತೀಚಿನ ದಿನಗಳಲ್ಲಿ ರೈತರು ಧಾನ್ಯಗಳ ಬೆಳೆಯುವುದನ್ನು ಕಡಿಮೆ ಮಾಡಿ ವಾಣಿಜ್ಯ ಬೆಳೆಗಳತ್ತ ರೈತರು ಮುಖ ಮಾಡಿದ್ದಾರೆ. ಸರ್ಕಾರ ತಜ್ಞರ ಸಮಿತಿ ರಚಿಸಿ ರೈತರ ಬೆಳೆಗಳಿಗೆ ಉತ್ತಮ ಬೆಲೆ ನೀಡಬೇಕೆಂದರು.

ಸಹಾಯಕ ಕೃಷಿ ನಿರ್ದೇಶಕ ರಾಮಚಂದ್ರ ನಾಯ್ಕರ ಕೃಷಿ ಭಾಗ್ಯ ಯೋಜನೆ ಮತ್ತು ಇಲಾಖೆಯ ಸವಲತ್ತುಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಡಾ. ಸುನೀಲಕುಮಾರ ನೂಲಿ ಮಾತನಾಡಿ, ಕಬ್ಬು ಬೇಸಾಯ ಪದ್ಧತಿ, ಅಂತರ ಬೆಳೆ, ಮಿಶ್ರ ಬೆಳೆ, ಸಮಗ್ರ ಕೃಷಿ ಪದ್ಧತಿ ಹಾಗೂ ಗೊಣ್ಣೆ ಹುಳು ನಿರ್ವಹಣಾ ಕ್ರಮ, ಕಬ್ಬಿನ ರವದಿ ಮಹತ್ವ ಕುರಿತು ತಿಳಿಸಿದರು. ಕೃಷಿ ಅಧಿಕಾರಿ ರಾಘವೇಂದ್ರ ತಳವಾರ, ಬಿ.ಆರ್. ರಾಯವ್ವಗೋಳ, ಸಹಾಯಕ ಕೃಷಿ ಅಧಿಕಾರಿ ಎಸ್.ಐ.ಯರಗಟ್ಟಿ, ಆತ್ಮ ಯೋಜನೆ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಸಮೀರ್ ಲೋಕಾಪುರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಕಾದಂಬರಿ ಪಾಟೀಲ, ಕೃಷಿ ಸಂಜೀವಿನಿ ತಾಂತ್ರಿಕ ಸಿಬ್ಬಂದಿ ಮಹಾಂತೇಶ ಜಿಣಗಿ, ಮಲ್ಲಪ್ಪ ತನೋಡಿ, ಶಿವಾನಂದ ಪದ್ಮಣ್ಣವರ, ಸುನೀಲ ಕಮತೆ, ವೀರಭದ್ರ ಠಬ್ಬನ್ನವರ, ರಾಜು ಮಾನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net