ಸರ್ಕಾರ ಮತ್ತಷ್ಟು ಪ್ರೋತ್ಸಾಹಿಸಲಿ

h5-Gangubai Hangal 2
Published on

ಹುಬ್ಬಳ್ಳಿ: ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಲು ವಿದ್ಯಾರ್ಥಿಗಳು ಪ್ರತಿ ತರಗತಿಗೆ ಸಾವಿರಾರು ರೂ. ಶುಲ್ಕ ಪಾವತಿಸಬೇಕಾದ ಪರಿಸ್ಥಿತಿ ಇದೆ. ಇಂಥ ಆರ್ಥಿಕ ಸಾಮರ್ಥ್ಯ ಇಲ್ಲದ ಪ್ರತಿಭಾವಂತರಿಗೆ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್​ನಿಂದ ಅತ್ಯುತ್ತಮ ಗುಣಮಟ್ಟದ ಗುರುಕುಲ ಮಾದರಿ ಶಿಕ್ಷಣ ನೀಡುತ್ತಿರುವುದು ಇಡಿ ದೇಶಕ್ಕೆ ಮಾದರಿಯಾಗಿದೆ ಎಂದು ಖ್ಯಾತ ಹಿಂದುಸ್ತಾನಿ ಗಾಯಕ ಪಂ. ಗಣಪತಿ ಭಟ್ ಹಾಸಣಗಿ ಹೇಳಿದರು.

ನಗರದ ಉಣಕಲ್ಲಿನ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಆವರಣದಲ್ಲಿ ಶುಕ್ರವಾರ ಗಂಗೂಬಾಯಿ ಹಾನಗಲ್ ಅವರ 108ನೇ ಜನ್ಮದಿನಾಚರಣೆ ಮತ್ತು ಎರಡನೇ ಹಂತದಲ್ಲಿ ನಾಲ್ಕು ವರ್ಷದ ಸಂಗೀತಾಭ್ಯಾಸ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಗಂಗೂಬಾಯಿ ಅವರು ದಿವ್ಯ ಚೇತನ. ಹುಬ್ಬಳ್ಳಿ ಹಾಗೂ ನಾಡಿನ ಹೆಸರನ್ನು ಬಹಳ ಎತ್ತರಕ್ಕೆ ಕೊಂಡೊಯ್ದರು. ಯಾವ ಉದ್ದೇಶದಿಂದ ಈ ಗುರುಕುಲ ಸ್ಥಾಪನೆಯಾಯಿತೋ, ಅದರಲ್ಲಿ ಈಗಾಗಲೇ ಶೇ.50ರಷ್ಟು ಯಶಸ್ಸನ್ನು ಕಂಡಿದೆ. ಸರ್ಕಾರ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಗುರುಕುಲದಲ್ಲಿ ಸಂಗೀತ ಕಛೇರಿಗಳು ನಡೆಯುವಂತಾಗಬೇಕು. ಇಲ್ಲಿ 4 ವರ್ಷ ಕಾಲ ಶಿಕ್ಷಣ ಪಡೆದು ಸಂಗಿತ ಜಗತ್ತಿಗೆ ಕಾಲಿಡುತ್ತಿರುವವರು ಹೆಚ್ಚಿನ ಸಾಧನೆ ಮಾಡಬೇಕು ಎಂದರು.

ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಾಯಕ ಪಾಲನಕರ ಮಾತನಾಡಿ, ಆಧುನಿಕ ದಿನಗಳಲ್ಲಿ ಕಲೆ, ಸಂಸ್ಕೃತಿ ಪರಂಪರೆ ಮುಂದುವರಿಸಲು ಈ ಸಂಸ್ಥೆ ಉತ್ತಮ ಕೊಡುಗೆ ನೀಡುತ್ತಿದೆ. ಇಲ್ಲಿ ಕಲಿತವರು ಗಂಗಜ್ಜಿಯಂತೆ ದೇಶದ ಹೆಮ್ಮೆಯ ಸಂಗೀತಗಾರರಾಗಲಿ ಎಂದರು.

ಮಾಜಿ ಸಂಸದ ಪೊ›. ಐ.ಜಿ. ಸನದಿ ಮಾತನಾಡಿ. ಗಂಗೂಬಾಯಿ ಹಾನಗಲ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಗುರುಕುಲ ಇರುವ ಪ್ರದೇಶಕ್ಕೆ ಗಂಗಾ ನಗರ ಎಂದು ನಾಮಕರಣ ಮಾಡಿದರೆ ಅರ್ಥಪೂರ್ಣವಾಗುತ್ತದೆ ಎಂದರು.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ. ಡೊಳ್ಳಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಮಾತನಾಡಿದರು.

ಈ ಸಂದರ್ಭದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭೋಗೆನಾಗರಕೊಪ್ಪದ ಬಸವರಾಜ ಬ. ಕಡ್ಲೆಣ್ಣವರ ಹಾಗೂ ಗಂಗೂಬಾಯಿ ಹಾನಗಲ್ ಕುಟುಂಬದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಾಲ್ಕು ವರ್ಷದ ಸಂಗೀತ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಸತ್ಕರಿಸಲಾಯಿತು. ಪ್ರಮುಖರಾದ ನಾರಾಯಣರಾವ್ ಹಾನಗಲ್, ಪಂ. ಕೈವಲ್ಯಕುಮಾರ ಗುರವ, ವಿದುಷಿ ವಿಜಯಾ ಜಾಧವ ಗಾಟ್ಲೆವಾರ್, ಆಡಳಿತಾಧಿಕಾರಿ ಜಿ.ವಿ. ಪಾಟೀಲ, ಸಹಾಯಕ ಆಡಳಿತಾಧಿಕಾರಿ ಟಿ.ಬಿ. ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಇನ್ಸಾಫ್ ಕಾರ್ಯಕ್ರಮ ನಿರೂಪಿಸಿದರು. ನಂತರ, ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಆರಂಭದಲ್ಲಿ ಗಂಗಜ್ಜಿ ಸಮಾಧಿಗೆ ಪುಷ್ಪಗುಚ್ಛ ಸಲ್ಲಿಸಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಅವರ ಕುಟುಂಬದವರಾದ ವೈಷ್ಣವಿ ಹಾನಗಲ್ ಗಾಯನ ಪ್ರಸ್ತುತಪಡಿಸಿದರು.

ಶಿಕ್ಷಣ ಪೂರೈಸಿದವರಿವರು

ಅಂಬರೀಷ ಎಚ್. ಭಜಂತ್ರಿ, ಪ್ರವೀಣ ಕೊಟ್ರಯ್ಯ ಸಂಕಿನಮಠ, ಮೇಧಾ ಕೆ. ಹೋಬಳಿ, ಕವಿತಾ ವಿಜಯ ಸುತಾರ, ಅನುಪಕುಮಾರ ಸಿಂಗ್, ಎಚ್.ಎಸ್. ಕೇಶವ, ಸುಷ್ಮಾ ಮಕಾಳಿ, ಉಮಾ ಶಂಕರ ಇವರು ಗಂಗೂಬಾಯಿ ಗುರುಕುಲದಲ್ಲಿ ಶಿಕ್ಷಣ ಪೂರೈಸಿ ಶುಕ್ರವಾರದ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ಪಡೆದ ಯುವ ಸಂಗೀತಗಾರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net