

ಅರಕೇರಾ: ರಾಜಕೀಯ ಪಕ್ಷಗಳ ಸುಳ್ಳು ಭರವಸೆ, ದುರಾಡಳಿತ, ಅಧಿಕಾರದ ಮೋಹದಿಂದ ಆಗುತ್ತಿರುವ ತೊಂದರೆಗಳಿಗೆ ಬೇಸತ್ತು ಜನರು ರೈತ ಸಂಘದತ್ತ ಮುಖ ಮಾಡಿದ್ದಾರೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ಇಲ್ಲಿನ ಗ್ರಾಪಂ ಕಚೇರಿ ಹತ್ತಿರ ರೈತ ಸಂಘದ ನಾಮಫಲಕ ಅನಾವರಣಗೊಳಿಸಿ ಶನಿವಾರ ಮಾತನಾಡಿದರು. ರೈತರ ಸಾಲ ಮನ್ನಾಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ 12 ವರ್ಷವಾದರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಫಸಲ್ ಬಿಮಾ ಯೋಜನೆ ಹೆಸರಲ್ಲಿ ರೈತರಿಗೆ ವಂಚನೆ ನಡೆಯುತ್ತಿದೆ. ಬಹು ರಾಷ್ಟ್ರೀಯ ಕಂಪನಿಗಳಿಂದ ಫಲವತ್ತಾದ ರೈತರ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಯುತ್ತಿದೆ.
ರೈತರು ಸಂಘಟಿತರಾಗಿ ಹೋರಾಟದ ಮೂಲಕ ಕೃಷಿ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಬೇಕು. ರೈತರು ಬೆಳೆದ ಬೆಳೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ನಿಗದಿ ಮಾಡಿ ಕಾನೂನು ಜಾರಿಗೊಳಿಸಬೇಕು ಎಂದ ಅವರು, ಸರ್ಕಾರದ ಸವಲತ್ತುಗಳನ್ನು ಬಡವರಿಗೆ ತಲುಪಿಸಲು ಪದಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಅಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ್ ಮಾತನಾಡಿದರು. ಹಿರಿಯ ಹೋರಾಟಗಾರ ಭೀಮೇಶ್ವರ ರಾವ್, ರಾಜ್ಯ ಸಂಘಟನಾ ಕಾರ್ಯದರ್ಶಿ ಯಂಕಪ್ಪ ಕಾರ್ಬರಿ, ಪ್ರಮುಖರಾದ ಜಿ.ಬೂದೆಪ್ಪ ಸಾಹುಕಾರ್, ಹಾಜಿ ಮಸ್ತಾನ್ ಬಿ.ಗಣೇಕಲ್, ಶರಣು ಹೂಗಾರ, ಹನುಮಗೌಡ ಜಾಲಹಳ್ಳಿ, ಹನುಮೇಶ ನಾಯಕ, ಲಿಂಗಣ್ಣ ಹಟ್ಟಿ, ಶಂಕರಗೌಡ ದೇವತಗಲ್, ಶಾಂತಮೂರ್ತಿ ಸ್ವಾಮಿ, ಭಗವಂತ್ರಾಯ, ಅಮರೇಶ, ಸಾಬಣ್ಣ, ಸಿದ್ದಣ್ಣ ಇತರರಿದ್ದರು.