

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದ 34 ಸರ್ಕಾರಿ ಇಲಾಖೆಗಳಲ್ಲಿ 2.5ಲಕ್ಷ ಹುದ್ದೆಗಳು ನಿವೃತ್ತಿಯಿಂದ ಖಾಲಿಯಾಗಿದ್ದು, ಅವುಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಹಲವು ಬಾರಿ ಒತ್ತಡ ಹೇರಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ದೂರಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲೇ ಲಕ್ಷಕ್ಕೂ ಮೀರಿ ಪದವೀಧರ ನಿರುದ್ಯೋಗಿಗಳಿದ್ದಾರೆ. ಹೀಗೆ ರಾಜ್ಯಾದ್ಯಂತ ಸಾಕಷ್ಟು ಜನರಿದ್ದಾರೆ. ನಿವೃತ್ತಿಯಿಂದ ಖಾಲಿಯಾದ ಹುದ್ದೆ ಭರ್ತಿ ಮಾಡಿದರೆ ಯುವಕರಿಗೆ ಉದ್ಯೋಗ ನೀಡುವುದರ ಜತೆಗೆ ಸದ್ಯದ ಸರ್ಕಾರಿ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆ ಆದಂತಾಗಲಿದೆ ಎಂದರು.
ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಅನುದಾನ ಒದಗಿಸಲು ಸದನದಲ್ಲಿ ಮಾತನಾಡಿದ್ದರ ಪರಿಣಾಮ 200 ಕೋಟಿ ರೂ. ಬಿಡುಗೆಯಾಗಿದೆ. ವಿವಿ ನೌಕರರ ಸಂಬಳ ಹಾಗೂ ಪಿಂಚಣಿಗೆ ಸರ್ಕಾರ ಒದಗಿಸಬೇಕಾದ ಅನುದಾನ ನೀಡದೆ ಆಂತರಿಕ ಸಂಪನ್ಮೂಲದಿಂದ ಭರಿಸಿಕೊಳ್ಳಲು ಹೇಳಿದೆ. ಆದರೆ ಇದು ಕಷ್ಟ ಸಾಧ್ಯ. ಆದಾಗ್ಯೂ ಕವಿವಿ ಅಂತಹ ವಿವಿಗಳು ಹಳೇ ವಿದ್ಯಾಥಿರ್ಗಳ ಸಹಕಾರದಿಂದ ವಿವಿಯನ್ನು ಆಥಿರ್ಕ ಸಂಕಷ್ಟದಿಂದ ಪಾರು ಮಾಡುವ ಯೋಚನೆ ಮಾಡಬೇಕು. ಹಳೇ ಪಿಂಚಣಿ ಜಾರಿ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈಗಾಗಲೇ ಹಲವು ಬಾರಿ ಈ ಕಾರ್ಯಕ್ಕೆ ಹೋರಾಟ ಮಾಡಿದ್ದು, ಬರುವ ಅಧಿವೇಶನದಲ್ಲೂ ಸರ್ಕಾರಕ್ಕೆ ಪ್ರಶ್ನೆ ಕೇಳುತ್ತೇನೆ ಎಂದರು.