ಸರ್ಕಾರವೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲಿ, ಪಿಪಿಪಿಯೂ ಬೇಡ-ಯಾವ ಪಾಪಿಯೂ ಬೇಡ, ಸಂಸದರ ರಮೇಶ ಜಿಗಜಿಣಗಿ ಮಾರ್ಮಿಕ ಹೇಳಿಕೆ

Ramesh Jigajinagi 4 JAN 20
Published on

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್‌ಗೆ ಬೇಡಿಕೆ ಹೆಚ್ಚಾಗಿದ್ದು, ವ್ಯಾಪಕವಾಗಿ ಹೋರಾಟಗಳು ನಡೆಯುತ್ತಿವೆ. ಹೀಗಾಗಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂಬುದು ನನ್ನದೂ ಒತ್ತಾಯವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ಈ ಹಿಂದೆಯೇ ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಾಕಷ್ಟು ಪತ್ರ ವ್ಯವಹಾರ ನಡೆಸಿದ್ದೇನೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೂ ಮನವರಿಕೆ ಮಾಡಿಕೊಟ್ಟಿದ್ದೇನೆ. ಖುದ್ದಾಗಿ ಭೇಟಿ ನೀಡಿ ಮನವಿ ಕೂಡ ಸಲ್ಲಿಸಿದ ಫಲವಾಗಿ ಸರ್ಕಾರಿ ವೈದ್ಯಕೀಯ ಕಾಲೇಜ್‌ನ ಕನಸು ಸಾಕಾರಗೊಂಡಿದೆ. ರಾಜ್ಯ ಸರ್ಕಾರ ಅದನ್ನು ಖಾಸಗಿ ಸಹಭಾಗಿತ್ವಕ್ಕೆ ನೀಡದೇ ಸರ್ಕಾರದಿಂದಲೇ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಏಮ್ಸ್ ತರಲು ಸಂಸದರು ಶ್ರಮಿಸಲಿ ಎಂಬ ಸಚಿವ ಶಿವಾನಂದ ಪಾಟೀಲರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಂಸದರು, ಏಮ್ಸ್ ತರುವ ನಿಟ್ಟಿನಲ್ಲಿ ಪ್ರಯತ್ನ ನಿರಂತರವಾಗಿದೆ. ಆದರೆ, ಅದಕ್ಕೆ ಬಹಳಷ್ಟು ಜಂಜಾಟಗಳಿವೆ. ಆದರೂ ಬಿಟ್ಟಿಲ್ಲ. ಆ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಇನ್ನು ಪಿಪಿಪಿ ಮಾದರಿಗೆ ಕೇಂದ್ರ ಸರ್ಕಾರದ ನಿರ್ದೇಶನವಿದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆಯನ್ನು ಕಟುವಾಗಿ ಖಂಡಿಸಿದ ಸಂಸದರು, ಅಂಥ ಯಾವುದೇ ನಿರ್ದೇಶನ ಕೇಂದ್ರ ಸರ್ಕಾರ ನೀಡಿಲ್ಲ. ಉಪಮುಖ್ಯಮಂತ್ರಿಗಳು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net