

ಯುವ ಸಮುದಾಯ ಮದ್ಯಪಾನ, ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನೇ ಹಾಳು ಮಾಡಿಕೊಳ್ಳುತ್ತಿದೆ. ಹೀಗಾಗಿ ಆರೋಗ್ಯ ಪಾನೀಯಗಳಾದ ತೆಂಗಿನ ನೀರಾ, ದ್ರಾಕ್ಷಿ ವೈನ್, ಹರ್ಬಲ್ ಜ್ಯೂಸ್‌ಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಅಖಿಲ ಭಾರತ ಈಡಿಗರ ಒಕ್ಕೂಟದ ಅಧ್ಯಕ್ಷ ಡಾ.ಈ.ಮುರಳೀಧರ್ ತಿಳಿಸಿದರು.
ನೀರಾ ಎಂಬುದು ಸೇಂದಿಯಲ್ಲ. ಆದರೆ, ಕೆಲ ರೈತರು ನೀರಾ ಇಳಿಸಿ, ಅದಕ್ಕೆ ರಾಸಾಯನಿಕ, ಬಣ್ಣ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವುದು ಬೇಸರದ ಸಂಗತಿ. ನೀರಾ ಇಳಿಸುವುದರಿಂದಾಗಿ ತೆಂಗಿನ ನುಸಿ ಪೀಡೆ ಬರುವುದು ಕಡಿಮೆ ಎಂದು ವಿಜ್ಞಾನಿಗಳೇ ಹೇಳಿದ್ದಾರೆ. ಹೀಗಾಗಿ ನೀರಾ ಇಳಿಸುವುದಕ್ಕೆ ಹಾಗೂ ಅವುಗಳನ್ನು ಪ್ಯಾಕೆಟ್ ರೂಪದಲ್ಲಿ ಮಾರಾಟ ಮಾಡುವುದಕ್ಕೆ ಸರ್ಕಾರ ಉತ್ತೇಜನ ನೀಡಬೇಕು. ಇದೇ ರೀತಿ ಈ ಹಿಂದೆ ಬಂಟ್ವಾಳದಲ್ಲಿ ತೆರೆದಿದ್ದ ಕಾರ್ಖಾನೆ ಪುನಶ್ಚೇತನಗೊಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ನಗರದ ಸಿದ್ಧಾರ್ಥ ಬಡಾವಣೆಯ ತೂಗುದೀಪ ವೃತ್ತದ ಬಳಿ ನೀರಾ ಕೆಫೆ ತೆರೆಯಲಿದ್ದು, ಇಲ್ಲಿ ತಾಜಾ ನೀರಾ ಹಾಗೂ ಇತರ ಪಾನೀಯ ಮಾರಾಟ ಮಾಡುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.