

ಮಾನ್ವಿ: ರಾಜ್ಯದಲ್ಲಿ ವೀರಶೈವ-ಲಿಂಗಾಯತ ಮಠಗಳ ಕೊಡುಗೆ ಅಪಾರವಾಗಿದ್ದು, ಎಲ್ಲ ವರ್ಗದವರಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹ ನೀಡುತ್ತ ಬಂದಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಕಲ್ಮಠ ದಸರಾ ಸುವರ್ಣ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲ್ಮಠವು ಶಿಕ್ಷಣ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸಂಸ್ಕಾರ ಕಲಿಸುತ್ತಿದೆ ಎಂದರು.
ಜೇವರ್ಗಿ, ಶಹಪುರದಲ್ಲಿ ಅತಿವೃಷ್ಟಿಯಿಂದ ರೈತರ ಬೆಳೆ ಹಾನಿಯಾಗಿರುವುದನ್ನು ಪರಿಶೀಲಿಸಿದ್ದೇನೆ. ರಾಯಚೂರು ಜಿಲ್ಲೆಯಲ್ಲಿ ಕೂಡ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಬರಬೇಕು. ಎಲ್ಲ ಜಾತಿ, ಧರ್ಮದವರಿಗೆ ನ್ಯಾಯ, ಆಶ್ರಯವನ್ನು ನೀಡುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ ಎಂದ ಅವರು, ಮಾಜಿ ಸಿಎಂ ಯಡಿಯೂರಪ್ಪ ನಾಲ್ಕು ಸಲ ಸಿಎಂ ಆಗಿದ್ದರು. ರೈತರಿಗೆ ಉಚಿತ ವಿದ್ಯುತ್, ಪ್ರತ್ಯೇಕ ಕೃಷಿ ಬಜೆಟ್ ನೀಡಿದರು. ಅದ್ದರಿಂದ ರಾಜ್ಯದ ಯಾವುದೇ ಜಿಲ್ಲೆಗೆ ಹೋದರೂ ಜನರು ನನ್ನನ್ನು ಆದರದಿಂದ ಸ್ವಾಗತಿಸುತ್ತಾರೆ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಸಚಿವ ಶಿವನಗೌಡ ನಾಯಕ ಮಾತನಾಡಿದರು. ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು, ಬೃಹನ್ಮಠ ನೀಲಗಲ್ ಸಂಸ್ಥಾನ ಮಠದ ರೇಣುಕಶಾಂತಮಲ್ಲ ಶಿವಾಚಾರ್ಯರು, ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಶ್ರೀಗಳು, ಹಜರತ್ ಖಾದರಲಿಂಗ ಸಾಹೇಬ್, ಫಾ.ಸುರೇಶ ವಿನ್ಸೆಂಟ್ ಇತರರಿದ್ದರು.