

ಸಿದ್ದಾಪುರ: ತಾಲೂಕಿನಲ್ಲಿ ಬಹುತೇಕ ರೈತರು ಅಡಕೆ ಬೆಳೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಅಡಕೆಗೆ ಎಲೆಚುಕ್ಕಿ ರೋಗ ಬಾಧಿಸಿದ್ದು ರೈತರಿಗೆ ಆತಂಕ ಎದುರಾಗಿದ್ದು, ತೋಟಗಳು ಸರ್ವನಾಶವಾಗುತ್ತಿವೆ. ಸರ್ಕಾರ ಕೂಡಲೇ ಅಡಕೆ ಬೆಳೆಗಾರರ ನೆರವಿಗೆ ಬರಬೇಕು ಎಂದು ತಾಲೂಕು ರೈತ ಮುಖಂಡ ವೀರಭದ್ರ ನಾಯ್ಕ ಆಗ್ರಹಿಸಿದರು.
ತಾಲೂಕು ರೈತ ಪ್ರಮುಖರು ಹಾಗೂ ಅಡಕೆ ಬೆಳೆಗಾರರು ಮುಖ್ಯಮಂತ್ರಿ ಅವರಿಗೆ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಹೊರದೇಶಗಳಿಂದ ಅಡಕೆ ಆಮದು ಮಾಡಿಕೊಳ್ಳುತ್ತಿರುವುದರಿಂದ ದಿನನಿತ್ಯ ಅಡಕೆ ಧಾರಣೆ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ಕೈ ಕಟ್ಟಿ ಕುಳಿತುಕೊಂಡಿವೆ. ಅಡಕೆ ತೋಟ ನಾಶವಾದರೆ ಅಥವಾ ಬೆಲೆ ಕಡಿಮೆಯಾದರೆ ರೈತರಿಗೆ ಯಾವುದೇ ದಾರಿ ಇಲ್ಲ. ಆದ್ದರಿಂದ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ರೈತರ ನೆರವಿಗೆ ನಿಂತು ಎಲೆಚುಕ್ಕಿ ರೋಗಕ್ಕೆ ಔಷಧಿಯನ್ನು ಉಚಿತವಾಗಿ ಕೊಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಮತ್ತು ಮರಗಳ ಹಾನಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರಿಗೆ ವೀರಭದ್ರ ನಾಯ್ಕ ಪ್ರಮುಖರು ಮನವಿ ಸಲ್ಲಿಸಿದರು. ರೈತರಾದ ವಿಠ್ಠಲ ನಾಯ್ಕ, ಲಕ್ಷ್ಮಣ್ ನಾಯ್ಕ, ಐ.ಸಿ. ನಾಯ್ಕ, ಸುರೇಶ ನಾಯ್ಕ, ರವಿಕುಮಾರ್, ಸಿ .ಎಸ್. ಗೌಡರ್, ಇತರರಿದ್ದರು.