ಸರ್ಕಾರವೇ ಪಂಪ, ಕುಮಾರವ್ಯಾಸ ಜಯಂತಿ ಆಚರಿಸಲಿ

15
Published on

ಮೈಸೂರು: ಆದಿಕವಿ ಪಂಪ, ವರಕವಿ ಕುಮಾರವ್ಯಾಸ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದಲೇ ಆಚರಿಸಬೇಕು ಎಂದು ಹಿರಿಯ ಗಮಕಿ ಕೃ.ರಾಮಚಂದ್ರ ಮನವಿ ಮಾಡಿದರು.

ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕವು ಮಂಗಳವಾರ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ಏರ್ಪಡಿಸಿದ್ದ ಕುಮಾರವ್ಯಾಸ ಜಯಂತಿ ಉದ್ಘಾಟಿಸಿ ಹಾಗೂ 2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಕುಮಾರವ್ಯಾಸ ಪ್ರಶಸ್ತಿ ಪಡೆದಿದ್ದ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರ ಈ ಇಬ್ಬರು ಕವಿಗಳನ್ನು ರಾಜ್ಯಾದ್ಯಂತ ಸ್ಮರಣೆ ಮಾಡಬೇಕಾದ ಅಗತ್ಯವಿದೆ ಎಂದರು.
ಗಮಕ ವಿಶೇಷ ಕಲೆ. ಸಂಗೀತ ಮತ್ತು ಸಾಹಿತ್ಯದ ನಡುವೆ ಸಮನ್ವಯದ ಕಲೆ. ಗಮಕ ಮತ್ತು ಕುಮಾರವ್ಯಾಸನಿಗೆ ಅವಿನಾಭಾವ ಸಂಬಂಧ ಇದೆ. 10 ಪರ್ವಗಳಲ್ಲಿ 8000 ಪದ್ಯಗಳನ್ನು ಬರೆದಿರುವ ಕುಮಾರವ್ಯಾಸ ಗಮಕಿಗಳ ಉಸಿರು. ಇಂತಹ ಗಮಕ ಕಲೆಯನ್ನು ಉಳಿಸಿ, ಬೆಳೆಸಬೇಕು. ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣದ ರೀತಿಯಲ್ಲಿ ಈ ಕಲೆಯನ್ನು ಕಲಿಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಗಮಕ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸಕ್ಕೆ ಸರ್ಕಾರ ಒತ್ತು ನೀಡಬೇಕು ಎಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪಂಪ, ರನ್ನ, ಪೊನ್ನ, ರಾಘವಾಂಕ, ಕುಮಾರವ್ಯಾಸರನ್ನು ಕನ್ನಡ ಸಾಹಿತ್ಯ ಲೋಕ ಮರೆಯುವಂತೆಯೇ ಇಲ್ಲ. ಕುಮಾರವ್ಯಾಸರ ಮಹತ್ವದ ಬಗ್ಗೆ ಕುವೆಂಪು ಅವರು ತಮ್ಮ ಕವನಗಳಲ್ಲಿ ವಿವರಿಸಿದ್ದಾರೆ. ನಾಡಗೀತೆಯಲ್ಲಿ ಕೂಡ ಕುಮಾರವ್ಯಾಸರನ್ನು ಸ್ಮರಿಸಿದ್ದಾರೆ. ಹೀಗಾಗಿ ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಕುಮಾರವ್ಯಾಸರ ಪ್ರಭಾವ ಅಪಾರ. ಇವತ್ತಿಗೂ ಕುಮಾರವ್ಯಾಸ ಭಾರತ ವಾಚನ- ವ್ಯಾಖ್ಯಾನ ಎಲ್ಲೆಡೆ ನಡೆಯುತ್ತಿದೆ ಎಂದರು.

ಜಿಲ್ಲಾ ಗಮಕ ಕಲಾ ಪರಿಷತ್ತು ಅಧ್ಯಕ್ಷ ಕೃ.ಪಾ. ಮಂಜುನಾಥ್ ಮಾತನಾಡಿ, ಮುಂಬರುವ ದಿನಗಳಲ್ಲಿ ಕುಮಾರವ್ಯಾಸನಿಗೆ ಕಾವ್ಯ ಸಮರ್ಪಣೆ ಎಂಬ ಕಾರ್ಯಕ್ರಮವನ್ನು ಎಲ್ಲ ಗಮಕಿಗಳನ್ನು ಒಗ್ಗೂಡಿಸಿ ಮಾಡುವ ಉದ್ದೇಶವಿದೆ. ಜತೆಗೆ ಜನವರಿ 21 ಅಥವಾ ತಿಥಿ- ನಕ್ಷತ್ರದ ಆಧಾರದ ಮೇಲೆ ಗಣ್ಯರು ನಿರ್ಧರಿಸುವ ದಿನದಂದು ರಾಜ್ಯಾದ್ಯಂತ ಏಕಕಾಲಕ್ಕೆ ಕುಮಾರವ್ಯಾಸ ಜಯಂತಿ ಆಚರಿಸಲಾಗುವುದು ಎಂದರು.

ಈ ಸಾಲಿನ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರಾದ ಕೃ.ರಾಮಚಂದ್ರ ಅವರು ನಡೆದಾಡುವ ಗಮಕ ವಿಶ್ವಕೋಶ ಎಂದು ಬಣ್ಣಿಸಿದರು. ಪ್ರೊ.ಪದ್ಮಿನಿ ಹೆಗಡೆ ಮಾತನಾಡಿದರು. ನಂತರ ಹಿರಿಯ ಹಾಗೂ ಕಿರಿಯ ಗಮಕಿಗಳಿಂದ ಕುಮಾರವ್ಯಾಸ ಭಾರತದ ಪದ್ಯಗಳ ವಾಚನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net