ಸರ್ಕಾರ ಚಾಲುಕ್ಯ ಉತ್ಸವ ಆಚರಿಸಲಿ

Let the government celebrate Chalukya Utsav
ಬಾದಾಮಿ ನಗರದ ಎಸ್.ಎಫ್. ಹೊಸಗೌಡ್ರ ವರ್ಲ್ಡ್ ಸ್ಕೂಲ್‌ನಲ್ಲಿ ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಹಮ್ಮಿಕೊಂಡ ಬಾದಾಮಿ ಚಾಲುಕ್ಯ ಉತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮಹೇಶ ಹೊಸಗೌಡ್ರ, ಬಿ.ಎ್. ಹೊರಕೇರಿ, ಡಾ. ಕರವೀರಪ್ರಭು ಕ್ಯಾಲಕೊಂಡ ಇತರರಿದ್ದರು.
Published on

ಬಾದಾಮಿ: ಚಾಲುಕ್ಯರ ಕಾಲದ ಗತವೈಭವ ಸಾರುವ ಚಾಲುಕ್ಯ ಉತ್ಸವವನ್ನು ಸರ್ಕಾರದಿಂದ ಪ್ರತಿ ವರ್ಷ ಆಚರಿಸಬೇಕು. ಈಗ ಮೇಘಮೈತ್ರಿ ಸಂಘಟನೆಯಿಂದ ಉತ್ಸವ ಆಯೋಜಿಸಿರುವ ಕಾರ್ಯ ಶ್ಲಾಘನೀಯ ಎಂದು ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹೇಶ ಹೊಸಗೌಡ್ರ ಹೇಳಿದರು.

ಪಟ್ಟಣದ ಜಯನಗರದ ಎಸ್.ಎಫ್. ಹೌಸಗೌಡ್ರ ಸ್ಕೂಲ್‌ನಲ್ಲಿ ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದಿಂದ ಎರಡು ದಿನ ಹಮ್ಮಿಕೊಂಡಿದ್ದ ‘ಬಾದಾಮಿ ಚಾಲುಕ್ಯ ಉತ್ಸವ-2024’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ವತಿಯಿಂದ ಪ್ರತಿ ವರ್ಷ ಈ ಹಿಂದೆ ಚಾಲುಕ್ಯ ಉತ್ಸವ ಆಯೋಜಿಸಲಾಗುತ್ತಿತ್ತು. ಅನಿವಾರ್ಯ ಕಾರಣಗಳಿಂದ ಈಗ ನಡೆದಿಲ್ಲ. ಪುನಃ ಚಾಲುಕ್ಯ ಉತ್ಸವ ಆಯೋಜಿಸುವ ಮೂಲಕ ಚಾಲುಕ್ಯರ ಕಾಲದ ಕಲೆ, ವಾಸ್ತುಶಿಲ್ಪ, ಇಂದಿನ ಜನಾಂಗಕ್ಕೆ ಪರಿಚಯಿಸುವ ಅಗತ್ಯವಿದೆ. ಸರ್ಕಾರದ ಜತೆಗೆ ಇಂತಹ ಸಂಘ-ಸಂಸ್ಥೆಗಳು ಕಲೆಗಳ ಉಳಿವಿಗೆ ಶ್ರಮಿಸಬೇಕಿದೆ. ಮೇಘಮೈತ್ರಿ ಸಂಘಟನೆ ಕಾರ್ಯ ಶ್ಲಾಘನೀಯ ಎಂದರು.

ಡಾ. ಶಿವಾನಂದ ಕುಬಸದ ಮಾತನಾಡಿ, ಕನ್ನಡ ಉಳಿಸಿ ಬೆಳೆಸಬೇಕು. ಅಶಿಕ್ಷಿತರಾದ ಗ್ರಾಮೀಣ ಪ್ರದೇಶದವರು ಕನ್ನಡ ಉಳಿಸುತ್ತಾರೆ. ಶಿಕ್ಷಿತರಾದ ನಾವು ಕನ್ನಡ ಬೆಳೆಸಬೇಕು ಎಂದರು.

ಖ್ಯಾತ ವೈದ್ಯ ಡಾ. ಕರವೀರಪ್ರಭು ಕ್ಯಾಲಕೊಂಡ ಮಾತನಾಡಿ, ಚಾಲುಕ್ಯ ಉತ್ಸವ ಪ್ರತಿವರ್ಷ ಮಾಡುತ್ತೇವೆಂದು ಸರ್ಕಾರಗಳು ಹೇಳುತ್ತ ಬಂದಿದ್ದು, ನಾಡಿನ ಧೀಮಂತ ಸಾಹಿತಿಗಳನ್ನು ಕಲಾವಿದರನ್ನು ಕರೆಸಿ ವಿಜೃಂಭಣೆಯಿಂದ ಮಾಡುತ್ತೇವೆಂದು ಆಶ್ವ್ವಾಸನೆ ನೀಡಲಾಗುತ್ತಿದೆ. 2015 ರಿಂದ ಇಲ್ಲಿಯವರೆಗೆ ಸರ್ಕಾರ ಚಾಲುಕ್ಯ ಉತ್ಸವ ಮಾಡದಿರುವುದು ದುರಂತ ಎಂದರು.

ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಪಿಎಸ್‌ಐ ನಿಂಗಪ್ಪ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಹಾಯ್ದು ವಿವಿಧ ಸಂಗೀತ ವಾದ್ಯಗಳೊಂದಿಗೆ ಎಸ್.ಎಫ್. ಹೊಸಗೌಡ್ರ ಸ್ಕೂಲ್ ತಲುಪಿತು.

ತಾಲೂಕು ಕಸಾಪ ಅಧ್ಯಕ್ಷ ಬಿ.ಎಫ್. ಹೊರಕೇರಿ ಧ್ವಜಾರೋಹಣ ನೆರವೇರಿಸಿದರು. ಬಾಗಲಕೋಟೆ ಜಿಲ್ಲೆಗೆ 25 ವರ್ಷ ತುಂಬಿದ ಸವಿನೆನಪಿಗಾಗಿ 25 ಕೃತಿಗಳ ಲೋಕಾರ್ಪಣೆ ಮಾಡಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಬಿ.ಎ್. ಹೊರಕೇರಿ, ಸಾಹಿತಿ ರವಿ ಕಂಗಳ, ಕಮತಗಿಯ ಶಿವಕುಮಾರ ಸ್ವಾಮೀಜಿ, ಸಾಹಿತಿ ರವಿ ತಿರಕನ್ನವರ, ಬಸವರಾಜ ಸಿಂದಗಿಮಠ, ಸಂಚಾಲಕರಾದ ಚನ್ನಬಸಪ್ಪ ಎಸ್. ಲೆಕ್ಕಿಹಾಳ, ರಮೇಶ ಕೊಕಾಟಿ, ಶ್ರೀನಿವಾಸ ಮಾರಾ, ಮುತ್ತು ಬಳ್ಳಾ, ಸದಾಶಿವ ಮರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net