

ನಾಗಮಂಗಲ: ಗಣಪತಿ ವಿಸರ್ಜನೆಯ ಮೆರವಣಿಗೆಯ ಸಂದರ್ಭ ನಡೆದಿರುವ ಕೋಮು ಗಲಭೆಯಿಂದ ಎರಡು ಕೋಮಿನವರ ಅಂಗಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಮಾಲೀಕರ ಬದುಕು ಬೀದಿಗೆ ಬಂದಿದೆ. ಇದರ ಸಂಪೂರ್ಣ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಲಿ ಎಂದು ಮಾಜಿ ಶಾಸಕ ಸುರೇಶ್‌ಗೌಡ ಒತ್ತಾಯಿಸಿದರು.
ಪಟ್ಟಣದಲ್ಲಿ ನಡೆದ ಕೋಮುಗಲಭೆಯಲ್ಲಿ ಹಾನಿಗೊಳಗಾದ ಸ್ಥಳಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಕಳೆದ ವರ್ಷ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮೈಸೂರು ರಸ್ತೆಯ ಮಸೀದಿ ಮುಂದೆ ಗಲಾಟೆ ನಡೆದಿದ್ದರೂ ಭದ್ರತೆ ನೀಡುವಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಒಂದು ವರ್ಗದವರನ್ನು ತುಷ್ಟೀಕರಣ ಮಾಡಲು ಹೋಗಿ ಈ ಘಟನೆ ನಡೆದಿದೆ. ಈ ಘಟನೆಯ ಸಂಪೂರ್ಣ ಹೊಣೆಯನ್ನು ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಹೊರಬೇಕಿದೆ ಎಂದರು.
ಕೂಡಲೇ ಪಟ್ಟಣ ಠಾಣಾಧಿಕಾರಿಯನ್ನು ಅಮಾನತುಗೊಳಿಸಬೇಕು. ಈ ಘಟನೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ತಪ್ಪಿತಸ್ಥನನ್ನು ವಿಡಿಯೋ ಆಧರಿಸಿ ಶಿಕ್ಷೆಗೆ ಒಳಪಡಿಸಬೇಕು. ಗಲಭೆಯಲ್ಲಿ ಪಾಲ್ಗೊಳ್ಳದಿರುವಂತಹ ಅಮಾಯಕರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಬಾರದು. ಇದು ಆಕಸ್ಮಿಕ ಘಟನೆಯಲ್ಲ, ಇದು ಪೂರ್ವನಿಯೋಜಿತ ಘಟನೆಯಾಗಿದೆ. ಆದ್ದರಿಂದ ಈ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಬೇಕಿದೆ ಎಂದರು.
ಒಂದೇ ಬಾರಿಗೆ ಅಷ್ಟು ದೊಡ್ಡ ಸಂಖ್ಯೆಯ ಜನರು ಒಂದೆಡೆ ಸೇರಲು ಕಾರಣವೇನು? ಮಾರಕಾಸ್ತ್ರಗಳನ್ನು ಒಂದೆಡೆ ಸಂಗ್ರಹಿಸಿಟ್ಟುಕೊಂಡು ಸಂಚು ರೂಪಿಸಿದ್ದರೂ ಗುಪ್ತಚರ ಇಲಾಖೆ ಮಾಹಿತಿ ನೀಡುವಲ್ಲಿ ವಿಫಲವಾಗಿದೆ. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಇಂತಹ ಘಟನೆಗಳು ನಡೆದಿರುವುದರಿಂದ ಪೊಲೀಸ್ ಇಲಾಖೆ ಮೇಲೆ ಯಾವ ರೀತಿ ನಂಬಿಕೆ ಹುಟ್ಟುತ್ತದೆ? ಇದೇ ರೀತಿ ಅನ್ಯಧರ್ಮದವರ ಹಬ್ಬಗಳ ಆಚರಣೆಯ ಸಂದರ್ಭ ಬಹುಸಂಖ್ಯಾತರಿರುವ ಪ್ರದೇಶಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತದೆಯೇ? ಇದನ್ನು ಜಿಲ್ಲಾಡಳಿತ ಸೂಕ್ಷ್ಮವಾಗಿ ಅವಲೋಕಿಸಿ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
ಇದೇ ಸಂದರ್ಭ ಎರಡೂ ಸಮುದಾಯದ ಮಹಿಳೆಯರು ಪಟ್ಟಣ ಪೊಲೀಸ್ ಠಾಣೆ ಎದುರು ನಡೆಸುತ್ತಿದ್ದ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರ ಜತೆ ಮಾತುಕತೆ ನಡೆಸಿ ಆತ್ಮಸ್ಥೈರ್ಯ ಹೇಳಿದರು.