ಸರ್ಕಾರ ಸೂಕ್ತ ಪರಿಹಾರ ನೀಡಲಿ

16 DVD 03
ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಅಕಾಲಿಕ ಮಳೆಯಿಂದ ನೆಲಕ್ಕರುಳಿದ ಭತ್ತದ ಬೆಳೆ.
Published on

ದೇವದುರ್ಗ: ಪಟ್ಟಣ ಸೇರಿ ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ರಾಶಿ ಹಂತಕ್ಕೆ ಬಂದಿದ್ದ ಭತ್ತದ ಬೆಳೆ ನೆಲಕ್ಕುರುಳಿದ್ದು ಅನ್ನದಾತರು ಕಂಗಲಾಗಿದ್ದಾರೆ. ಗುರುವಾರ ಹಾಗೂ ಶುಕ್ರವಾರ ರಾತ್ರಿ ಜಾಲಹಳ್ಳಿ ಸೇರಿ ವಿವಿಧೆಡೆ ಮಳೆ ಸುರಿದಿದೆ.

ಎರಡ್ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣವಿತ್ತು. ರಾತ್ರಿ ವೇಳೆ ಸುರಿದ ಮಳೆ ಹಾಗೂ ಗಾಳಿಗೆ ರಾಶಿ ಹಂತಕ್ಕೆ ಬಂದಿದ್ದ ಭತ್ತದ ಬೆಲೆ ನೆಲಕ್ಕೆ ಬೀಳುತ್ತಿದೆ. ಜಾಲಹಳ್ಳಿ, ಸೋಮನಮರಡಿ, ಗಾಣಧಾಳ, ಮುಂಡರಗಿ, ಗಲಗ ಸೇರಿ ವಿವಿಧೆಡೆ ಭತ್ತ ಸಂಪೂರ್ಣ ನೆಲಕ್ಕುರುಳಿದೆ. ಸದ್ಯ ಭತ್ತದ ಬೆಳೆ ರಾಶಿಹಂತಕ್ಕೆ ಬಂದಿದ್ದು ಸೋನಾ ಕಾವೇರಿ ಹಾಗೂ ಆರ್‌ಎನ್‌ಆರ್ ಭತ್ತದ ರಾಶಿ ನಡೆಯುತ್ತಿದೆ.

ಸೋನಾ ಮಸೂರಿ ಭತ್ತ 120ದಿನಗಳ ನಂತರ ರಾಶಿಗೆ ಬರಲಿದೆ. ಬಹುತೇಕ ರೈತರು ಆರ್‌ಎನ್‌ಆರ್ ಕಾವೇರಿ ಭತ್ತ ನಾಟಿ ಮಾಡಿದ್ದಾರೆ. ಫಲ ಹೆಚ್ಚಾಗಿ ಹಿಡಿಯುತ್ತಿದ್ದು ಭಾರಕ್ಕೆ ನೆಲಕ್ಕುರುಳುತ್ತಿದೆ. ಭತ್ತ ಕೊಯ್ಯುವ ಯಂತ್ರಗಳ ಕೊರತೆ ರಾಶಿಗೆ ತಡವಾಗುತ್ತಿದೆ. ಇದರ ನಡುವೆ ಭತ್ತ ಕೊಯ್ಯುವ ಯಂತ್ರದ ಬೆಲೆ ಏರಿಕೆ ಮಾಡಿದ್ದು ಒಂದು ಗಂಟೆಗೆ 2,500ರಿಂದ 2,800ರೂ.ಇದೆ. ಬೇಡಿಕೆ ಹೆಚ್ಚಾದಂತೆಲ್ಲ ಯಂತ್ರದ ಬೆಲೆಯೂ ಹೆಚ್ಚಳ ಮಾಡುತ್ತಿದ್ದು ಇದರಿಂದ ರೈತರು ಭತ್ತ ಕೊಯ್ಯಲು ಹಿಂದೇಟು ಹಾಕುತ್ತಿದ್ದಾರೆ.

ಭತ್ತ ನೆಲಕ್ಕುರುಳುವುದರಿಂದ ಕಾಳು ಉದುರುತ್ತಿದ್ದು ಯಂತ್ರದಿಂದ ರಾಶಿ ಮಾಡಲು ಸಮಸ್ಯೆಯಾಗಲಿದೆ. ಮತ್ತೆ ಭತ್ತವನ್ನು ದಾರಗಳಿಂದ ಎತ್ತಿಕಟ್ಟಿ ರಾಶಿ ಮಾಡಬೇಕಿದೆ. ಇದು ರೈತರಿಗೆ ಹೆಚ್ಚುವರಿ ಹೊರೆಯಾಗುತ್ತಿದೆ. ಕೂಡಲೇ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಜಾಲಹಳ್ಳಿ ರೈತರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net