

ರಬಕವಿ/ಬನಹಟ್ಟಿ: ಬೆಳಗಾವಿಯಲ್ಲಿ ಪ್ರತಿಭಟನಾನಿರತ ಪಂಚಮಸಾಲಿ ಸಮುದಾಯದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರ ಮೇಲೆ ಮಂಗಳವಾರ ಲಾಠಿ ಪ್ರಹಾರ ನಡೆಸಿರುವ ಪೊಲೀಸರ ಕ್ರಮ ವಿರೋಧಿಸಿ ಸಮಾಜದ ಮುಖಂಡರು ಅವಳಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರಬಕವಿಯ ಶಂಕರಲಿಂಗ ದೇವಸ್ಥಾನ ಮುಂಭಾಗದಲ್ಲಿ ತಾಲೂಕಿನ ನೂರಾರು ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ಶ್ರೀಶೈಲ ದಲಾಲ ಮಾತನಾಡಿ, ಪಂಚಮಸಾಲಿಗಳ ಹೋರಾಟ ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ದುರದೃಷ್ಟಕರ. ಸ್ವಾಮೀಜಿಗಳನ್ನು ಹೇಯವಾಗಿ ನಡೆಸಿಕೊಳ್ಳುವಲ್ಲಿ ಸರ್ಕಾರ ಕಾರಣವಾಗಿದೆ ಎಂದು ದೂರಿದರು.
2ಎ ಮೀಸಲಾತಿ ಬೇಡಿಕೆ ಈಡೇರಿಸುವಂತೆ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದವರು ನಿರಂತರ ಮನವಿ ಮಾಡುತ್ತಲೇ ಇದ್ದೇವೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸರು ದಬ್ಬಾಳಿಕೆಯಿಂದ ಶಾಂತಿ ಕದಡುವಂತೆ ಮಾಡಿದ್ದಕ್ಕೆ ಸರ್ಕಾರವೇ ಪೂರ್ಣ ಹೊಣೆಯಾಗಿದೆ. ಸ್ವಾಮೀಜಿ ಹಾಗೂ ಸಮುದಾಯದವರ ಕ್ಷಮೆ ಕೇಳುವುದರೊಂದಿಗೆ ಬೇಡಿಕೆಗಳನ್ನು ಈಡೇರಿಸಬೇಕೆಂದು ದಲಾಲ ಆಗ್ರಹಿಸಿದರು.
ಸಮಾಜದ ಇನ್ನೋರ್ವ ಹಿರಿಯರಾದ ಸುರೇಶ ಪಟ್ಟಣಶೆಟ್ಟಿ ಮಾತನಾಡಿ, ಸರ್ಕಾರದ ದ್ವೇಷ ಮನೋಭಾವದಿಂದ ಹೋರಾಟಗಾರರ, ವಕೀಲರ, ಮುಖಂಡರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಇಂಥ ಹೇಯ ಕೃತ್ಯ ನಡೆಸಿದ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದ ಘಟನೆ ಖಂಡಿಸಿ ಪಂಚಮಸಾಲಿ ಸಮಾಜ ಬೆಂಬಲಿಸಿ ಬಣಜಿಗ, ಶಿವಶಿಂಪಿ ಸೇರಿ ಹಲವು ಸಮಾಜಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಮಹಾದೇವ ಧೂಪದಾಳ, ಬಾಬಾಗೌಡ ಪಾಟೀಲ, ಲಕ್ಕಪ್ಪ ಪಾಟೀಲ, ಸಿದ್ಧನಗೌಡ ಪಾಟೀಲ, ಮಲ್ಲಪ್ಪ ಜನವಾಡ, ಸಂಗಮೇಶ ಪಾಟೀಲ, ಮಹಾದೇವ ಕೋಟ್ಯಾಳ, ರವಿ ದೇಸಾಯಿ, ಸಂಜಯ ಸಿದ್ದಾಪುರ, ರವಿ ಸಂಪಗಾಂವಿ, ಸಂಜು ತೆಗ್ಗಿ ಇತರರಿದ್ದರು.