ಚಿನ್ನ ಕಳ್ಳಸಾಗಣೆ ಸಮರ್ಪಕ ತನಿಖೆ ಆಗಲಿ

minister santhosh lad
ಕಾರ್ಮಿಕ ಸಚಿವ ಸಂತೋಷ್ ಲಾಡ್
Published on

ಶಿವಮೊಗ್ಗ: ದೇಶದಲ್ಲಿ ನಡೆಯುತ್ತಿರುವ ಚಿನ್ನ ಕಳ್ಳಸಾಗಣೆ ಬಗ್ಗೆ ಸಮರ್ಪಕ ತನಿಖೆ ಆಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟಿ ರನ್ಯಾರಾವ್ ಅವರಿಂದ ದೊಡ್ಡ ಮಟ್ಟದ ಚಿನ್ನ ಕಳ್ಳಸಾಗಣೆ ಆಗಿದೆ. ಅವರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಸಂಪೂರ್ಣವಾಗಿ ಹೊರಬರಬೇಕು ಎಂದರು.

ಸರ್ವೆ ವರದಿಗಳ ಪ್ರಕಾರ ಭಾರತದಲ್ಲಿ ಚಿನ್ನ ಕಳ್ಳಸಾಗಣೆಯಲ್ಲಿ ಬಾಂಬೆ ನಂಬರ್ ಒನ್ ಸ್ಥಾನದಲ್ಲಿದೆ. ಇದೊಂದು ಪ್ರಕರಣ ಬಿಟ್ಟರೆ ಇಡೀ ದೇಶದಲ್ಲಿ ಯಾವೆಲ್ಲ ವಿಮಾನ ನಿಲ್ದಾಣಗಳಲ್ಲಿ ಎಷ್ಟು ಚಿನ್ನ ಕಳ್ಳಸಾಗಣೆ ಮೂಲಕ ಬಂದಿದೆ ಎಂಬುದನ್ನು ಅಂದಾಜು ಮಾಡಬೇಕಿದೆ. ಹಾಗಾಗಿ ಇದು ಸಮರ್ಪಕವಾಗಿ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದರು.

ಡಿಜಿಪಿ ರಾಮಚಂದ್ರ ರಾವ್ ಅವರಿಗೆ ಕಡ್ಡಾಯ ರಜೆ ನೀಡಿರುವ ಉದ್ದೇಶ ನನಗೆ ಗೊತ್ತಿಲ್ಲ. ಅವರು ವಿಮಾನ ನಿಲ್ದಾಣದಲ್ಲಿ ಇರುವುದಿಲ್ಲ. ಕೇಂದ್ರ ಸರ್ಕಾರದ ಅಧಿಕಾರಿಗಳು ಅಲ್ಲಿರುತ್ತಾರೆ. ಶಿಷ್ಟಾಚಾರ ದುರ್ಬಳಕೆ ಕುರಿತು ಮಾತನಾಡುವುದಕ್ಕೆ ನಾನೊಬ್ಬ ಎಂಎಲ್‌ಎ, ಸಚಿವನಿದ್ದೇನೆ. ಶಿಷ್ಟಾಚಾರದಲ್ಲಿ ಅಧಿಕಾರಿಗಳು ಬೇರೆ ಏನು ಸಹಾಯ ಮಾಡಲು ಸಾಧ್ಯ ?. ಶಿಷ್ಟಾಚಾರದಲ್ಲಿ ಏನು ಮಿಸ್ ಆಪರೇಶನ್ ಆಗಿದೆಯೋ ಆ ಬಗ್ಗೆ ತನಿಖೆ ಆಗಬೇಕು. ಒಂದಲ್ಲ ಎರಡಲ್ಲ 30ರಿಂದ 40 ಬಾರಿ ರನ್ಯಾ ರಾವ್ ಹೋಗಿ ಬಂದಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇಲ್ಲವಾ? ಎಂದು ಪ್ರಶ್ನಿಸಿದರು.

ಚಿನ್ನ ಕಳ್ಳಸಾಗಣೆಯಲ್ಲಿ ಪೊಲೀಸ್ ಅಧಿಕಾರಿಗಳು ಏನು ಮಾಡಲು ಸಾಧ್ಯ ?, ಪೊಲೀಸ್ ಅಧಿಕಾರಿಗಳು ಹೇಳಿದ ತಕ್ಷಣ ಕಸ್ಟಮ್ ಅಧಿಕಾರಿಗಳು ಬಿಟ್ಟು ಬಿಡುತ್ತಾರಾ ?, ಪೊಲೀಸ್ ಅಧಿಕಾರಿಗಳು ಬ್ಯಾಗ್ ಹಿಡಿದುಕೊಂಡು ಕಸ್ಟಮ್ ಅಧಿಕಾರಿಗಳನ್ನು ಬೈಪಾಸ್ ಮಾಡಿ ಕರೆದುಕೊಂಡು ಬರುತ್ತಾರಾ ?, ಕಸ್ಟಮ್ಸ್ ಅಧಿಕಾರಿಗಳು ಯಾರು ?, ಆಕೆಯನ್ನು ಹೇಗೆ ಬಿಟ್ಟರೆಂದು ಬಿಜೆಪಿಯವರೇ ಹೇಳಬೇಕು ಎಂದರು.

ನಟಿ 30ರಿಂದ 40 ಬಾರಿ ವಿದೇಶಕ್ಕೆ ಹೋಗಿ ಬಂದಿದ್ದಾರೆ. ಅದನ್ನು ತನಿಖೆ ಮಾಡುವವರು ಯಾರು ?, ಕಸ್ಟಮ್ ಅಧಿಕಾರಿ ಬಗ್ಗೆ ಯಾರು ಮಾತನಾಡುವುದೇ ಇಲ್ಲ. ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂದು ಪದೇ ಪದೇ ನಮ್ಮನ್ನು ಪ್ರಶ್ನಿಸುತ್ತಿರಾ ?. ಕಸ್ಟಮ್ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ನೀವ್ಯಾರು ಮಾತನಾಡುವುದೇ ಇಲ್ಲ ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದರು.

ರನ್ಯಾ ಪ್ರಕರಣದಲ್ಲಿ ಇಬ್ಬರು ಸಚಿವರ ಭಾಗಿಯ ಬಗ್ಗೆ ಕುರಿತು ಮಾತನಾಡಿದ ಅವರು, ಮಾಜಿ ಸಚಿವ ಮುನಿರತ್ನ ಏನು ಮಾತನಾಡಿದ್ದಾರೆಂದು ನಾನು ಟೀಕೆ ಮಾಡಲು ಹೋಗುವುದಿಲ್ಲ. ಆದರೆ ಯಾರು ಭಾಗಿಯಾಗಿದ್ದಾರೆಂದು ಗೊತ್ತಾಗಬೇಕು ಅಲ್ವಾ. ರಾಜ್ಯ ಸರ್ಕಾರದಿಂದ ಯಾರೇ ಅಧಿಕಾರಿ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಬೇಕು ಎಂದರು.

ಚಿನ್ನ ಕಳ್ಳಸಾಗಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಕಸ್ಟಮ್ ಅಧಿಕಾರಿಗಳಿಂದ ಲೋಪ ಆಗಿದೆ ಎಂದ ಅವರು, ಕಾರ್ಮಿಕ ಇಲಾಖೆಯಲ್ಲಿ ಆಗಿರುವ ಅವ್ಯವಹಾರದ ಕಿಟ್ ಆರೋಪಕ್ಕೆ ದಾಖಲೆ ಇದ್ದರೆ ಕೊಡಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net