

ವಿಜಯಪುರ: ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಓಡಾಡುವಾಗ, ಅಪರಿಚಿತರ ಜೊತೆ ಸ್ನೇಹ ಬೆಳಸುವಾಗ, ಒಬ್ಬರೇ ಪ್ರಯಾಣಿಸುವಾಗ ಜಾಗೃತರಾಗಿರಬೇಕು ಎಂದು ಓಬವ್ವ ಪಡೆಯ ಹೆಡ್‌ಕಾನ್ಸ್‌ಸ್ಟೆಬಲ್ ಜಯಂತಿ ನಾಯಕ ಹೇಳಿದರು.
ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಯೋಗದಲ್ಲಿ ‘ಆತ್ಮರಕ್ಷಣೆ, ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಇರುವ ಕಾನೂನುಗಳು’ ವಿಷಯ ಕುರಿತು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಅತ್ಯಾಚಾರ, ಚುಡಾಯಿಸುವಿಕೆ, ಬ್ಲ್ಯಾಕ್ ಮೇಲ್, ಕಿರುಕುಳಗಳ ಹಾವಳಿ ಹೆಚ್ಚಾಗಿರುವ ಈ ಕಾಲದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಬೇಕು. ಕಾಮಾಟಿಪುರದಲ್ಲಿ ವೇಶ್ಯೆ ವೃತ್ತಿ ನಡೆಸಿ ಜೀವನ ಸಾಗಿಸುತ್ತಿರುವವರಲ್ಲಿ ಕರ್ನಾಟಕದ ಹುಡುಗಿಯರ ಸಂಖ್ಯೆಯೂ ಹೆಚ್ಚಿದೆ. ಕೆಲವರು ಬಡತನದ ಕಾರಣಕ್ಕೆ ಬಲಿಯಾಗಿದ್ದರೆ, ಇನ್ನೂ ಬಹುತೇಕರು ಸುಳ್ಳು ಮತ್ತು ಮೋಸದ ಸುಳಿಗೆ ಬಲಿಯಾದವರಿದ್ದಾರೆ. ಕೆಲವು ೇಕ್ ಕಂಪನಿಗಳು ಕೆಲಸ ಕೊಡುವುದಾಗಿ ನಂಬಿಸಿ ಮೋಸ ಮಾಡುವ ದಂಧೆಗಳು ನಡೆದಿವೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ೇಕ್ ಅಕೌಂಟ್ ತೆರೆದು ಮರಳು ಮಾಡುವ ಕಳ್ಳರೂ ಇದ್ದಾರೆ. ಇತ್ತಿಚೆಗೆ ಮನೆ ನುಗ್ಗಿ ಕಳ್ಳತನ ಮಾಡೋರಿಗಿಂತ ಆನ್‌ಲೈನ್‌ನಲ್ಲಿ ಕಳ್ಳತನ ಮಾಡೋರೇ ಹೆಚ್ಚಾಗಿದ್ದಾರೆ. ಅಂತಹ ವಿಚಾರಗಳ ಬಗ್ಗೆ ಸದಾ ಎಲ್ಲರೂ ಜಾಗೃತರಾಗಿರಬೇಕು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹ ಬೆಳಸುವಾಗ, ಒಟಿಪಿ ಸಂಖ್ಯೆ ಶೇರ್ ಮಾಡಿ ಎಂಬ ಕರೆಗಳು ಬಂದಾಗ, ಯಾವುದೇ ಲಿಂಕ್‌ಗಳು ಬಂದಾಗ ಎಚ್ಚರವಾಗಿರಬೇಕು. ಅನ್ಯಾಯವಾದಾಗ, ಬೆದರಿಕೆಯ ಕರೆಗಳು ಬಂದಾಗ ಹೆದರುವ ಬದಲು ತಕ್ಷಣವೇ ಪೊಲೀಸರಿಗೆ ದೂರು ನೀಡಿ, ಆನ್‌ಲೈನ್ ಮೂಲಕ ಮೋಸಕ್ಕೆ ಒಳಗಾದರೆ ಸೈಬರ್ ಕ್ರೈಂ ಅಡಿ ದೂರು ದಾಖಲಿಸಬೇಕು ಎಂದು ಹೇಳಿದರು.
ವಿವಿಯ ಕುಲಸಚಿವ ಪ್ರೊ.ಬಿ.ಎಸ್.ನಾವಿ ಸಮಾರಂಭವನ್ನು ಉದ್ಘಾಟಿಸಿದರು. ಓಬವ್ವ ಪಡೆಯ ಮಹಿಳಾ ಕಾನ್ಸ್‌ಸ್ಟೆಬಲ್ ಸಂಗೀತಾ ಶೇಡಬಾಳ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ , ಡಾ.ಜ್ಯೋತಿ ಉಪಾಧ್ಯೆ, ಅಶ್ವಿನಿ ಕೆ.ಎನ್ ಇತರರಿದ್ದರು.