

ಮೊಳಕಾಲ್ಮೂರು: ಬೋಧನೆಯಲ್ಲಿ ಗುಣಮಟ್ಟ, ಕ್ರಿಯಾಶೀಲತೆ ಕಾಯ್ದುಕೊಳ್ಳಲು ಶಿಕ್ಷಕರಿಗೆ ಕ್ರೀಡಾಕೂಟ ಹೆಚ್ಚು ಸಹಕಾರಿ ಆಗಲಿದೆ ಎಂದು ಬಿಇಒ ಕೆ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ಆಗಸ್ಟ್-5 ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ. ಆದರೆ, ಬೋಧನೆಯಲ್ಲಿ ಏಕತನದಿಂದ ಕ್ರೀಯಾಶೀಲತೆ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಇದರಿಂದ ಹೊರಬರಲು ಕ್ರೀಡಾಕೂಟ ಹೆಚ್ಚು ಸಹಕಾರಿ ಆಗಲಿದೆ ಎಂದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಬೌದ್ಧಿಕ ಬುದ್ಧಿಶಕ್ತಿ ವಿಕಾಸಕ್ಕೆ ಗುರುಕುಲ ಸೇವೆ ದೊಡ್ಡದು. ವೃತ್ತಿ ಪರದೆಯಲ್ಲೇ ಕಾಲ ಕಳೆಯುವ ಶಿಕ್ಷಕರು ವಿವಿಧ ಕ್ರೀಡಾ ಅಭ್ಯಾಸದ ಹವ್ಯಾಸ ಬೆಳಸಿಕೊಂಡರೆ ಸದೃಢ ಆರೋಗ್ಯ ತಂದುಕೊಳ್ಳಬುಹುದಾಗಿದೆ. ವರ್ಷಕ್ಕೊಮ್ಮೆ ನಡೆಯುವ ಕ್ರೀಡಾಕೂಟದಲ್ಲಿ ತಮ್ಮಲ್ಲಿರುವ ಸುಪ್ತ ಪ್ರತಿಭೆ ಪ್ರದರ್ಶಿಸುವ ಮೂಲಕ ಮಕ್ಕಳಿಗೂ ದಾರಿ ದೀಪವಾಗಲಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಸ್.ಈರಣ್ಣ ಮಾತನಾಡಿ, ಶಿಕ್ಷಣದಷ್ಟೇ ಕ್ರೀಡಾಚಟುವಟಿಕೆಗಳು ಲೌಕಿಕ ಬದುಕನ್ನು ಕಟ್ಟಿಕೊಡುತ್ತವೆ. ಶಾಲಾ ಹಂತದಲ್ಲಿ ಮಕ್ಕಳ ಮಧ್ಯೆ ನಡೆಯುವ ಕ್ರೀಡಾ ಚಟುವಟಿಕೆಗಳ ಅಭ್ಯಾಸಕ್ಕೆ ಪೂರಕವಾಗಿ ಶಿಕ್ಷಕರಲ್ಲಿ ಪರಿಪೂರ್ಣ ಅನುಭವ ಇರಬೇಕು ಎಂದರು.
ಆಟದಲ್ಲಿ ಸೋಲು-ಗೆಲುವು ಸಹಜ. ಆದರೆ, ಸ್ಪರ್ಧೆ ಮಾಡುವ ಮನೋಭಾವ ಭವಿಷ್ಯದಲ್ಲಿ ಒಂದು ದಿನ ಫಲಕೊಡಲಿದೆ. ಆಸಕ್ತಯಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರೆ ಜೀವನದಲ್ಲಿ ಕ್ರೀಯಾಶೀಲತೆ ದೊರೆಯಲಿದೆ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷೆ ಎಚ್.ಎನ್.ಸುಜಾತಾ, ಅಕ್ಷರ ದಾಸೋಹ ಅಧಿಕಾರಿ ಪಾತಲಿಂಗಪ್ಪ, ಇಸಿಒ ಓಂಕಾರಪ್ಪ, ಮಂಜುನಾಥ, ಮಮತಾ, ಮಲ್ಲೇಶಪ್ಪ, ಪ್ರಸನ್ನಕುಮಾರ, ಕರಿಬಸಪ್ಪ, ಜಿ.ಎನ್.ತಿಪ್ಪೇಸ್ವಾಮಿ, ಡಿ.ಎಸ್.ರಾಜಣ್ಣ, ಅಶೋಕ, ಎಸ್.ಆರ್.ತಿಪ್ಪೇಸ್ವಾಮಿ, ಜಾಕೀರ್, ವೀರಪ್ಪ, ಗಂಗಾರಡ್ಡಿ ಮುಕ್ಕಣ್ಣ, ಲೋಹಿತ್ ಇದ್ದರು.