

ತಿ.ನರಸೀಪುರ: ಪಟ್ಟಣದ ಪುರಸಭೆಯಲ್ಲಿ ನಡೆದಿದೆ ಎನ್ನಲಾಗದ 40 ಕೋಟಿ ರೂ. ವಂಚನೆ ಪ್ರಕರಣದ ಸಂಬಂಧ ರಾಜ್ಯ ಸರ್ಕಾರ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಹಾಗೂ ರೈತ ಸಂಘದ ಮುಖಂಡರು ಮತ್ತು ಕಾರ್ಯಕರ್ತರು ತಾಲೂಕು ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜವಾವಣೆಗೊಂಡ ಪ್ರತಿಭಟನಾಕಾರರು, ಪುರಸಭೆಗೆ ಪಾವತಿಸಬೇಕಿರುವ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಹಲವು ವರ್ಷಗಳಿಂದಲೂ ಕೆನರಾ ಬ್ಯಾಂಕ್ ನಕಲಿ ಸೀಲನ್ನು ಬಳಸಿ, ನಕಲು ಚಲನ್ ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂ. ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆ ತಿಳಿಯಲು ಸರ್ಕಾರ ಪ್ರಕರಣವನ್ನು ಅಪರಾಧ ತನಿಖೆ ವಿಭಾಗದ ಅಧಿಕಾರಿಗಳಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ವಿಭಾಗೀಯ ಸಂಚಾಲಕ ಡಾ.ಆಲಗೊಡು ಎಸ್.ಚಂದ್ರಶೇಖರ್ ಮಾತನಾಡಿ, ಪುರಸಭೆ ತೆರಿಗೆ ವಂಚನೆ ಪ್ರಕರಣ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಾಜಿ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ ಸೇರಿದಂತೆ 13 ಆಸ್ತಿ ಮಾಲೀಕರ ವಿರುದ್ಧ 3.43,626 ರೂ.ಗಳ ವಂಚನೆ ಪ್ರಕರಣವನ್ನು ಹಿಂದಿನ ಮುಖ್ಯಾಧಿಕಾರಿಗಳು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ತೆರಿಗೆ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತಮಟ್ಟದ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ್ ಮಂಜುಳಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮುಖಂಡರಾದ ಆರ್.ರಾಜು, ಮರಿಸ್ವಾಮಿ, ಪ್ರಭಾಕರ್, ಮನೋಜ್ ಕುಮಾರ್, ಗೋವಿಂದರಾಜು, ರಾಚಪ್ಪ, ಕುಮಾರ್, ಎಸ್.ಕೆ.ಶಿವಕುಮಾರ್, ಗವಿಸಿದ್ದಯ್ಯ, ಪರಶುರಾಮ, ಕಾರ್ ಸ್ವಾಮಿ, ಜಯಣ್ಣ, ಮಹೇಶ, ಅರ್ಜುನ್, ಕಳ್ಳಿಪುರ ಮಹದೇವಸ್ವಾಮಿ, ರಾಮಕೃಷ್ಣ, ಚಲುವರಾಜು, ರಾಜು, ಶಾಂತಾ ನಾಗರಾಜು, ಶಂಕರೇಗೌಡ, ಸೋಮಣ್ಣ, ಜಗದೀಶ್, ವೆಂಕಟೇಶ್, ಶಿವನಂಜು, ಮಹದೇವಸ್ವಾಮಿ ಇತರರು ಇದ್ದರು.