

ಸುತ್ತೂರು: ಆಹಾರ ಕಸದ ತೊಟ್ಟಿ ಸೇರುವ ಬದಲು ಹಸಿದ ಹೊಟ್ಟೆಯನ್ನು ತುಂಬಿಸಲಿ ಎಂದು ಬೆಂಗಳೂರಿನ ಆಹಾರ ಸಂರಕ್ಷಣಾ ಜನ ಜಾಗೃತಿ ಅಭಿಯಾನ ತಂಡದ ಸಂಚಾಲಕ ಎನ್.ಕೆ.ಮೋಹನ್‌ಕುಮಾರ್ ಹೇಳಿದರು.
ಆಹಾರದ ಮಹತ್ವ ಕುರಿತು ಸುತ್ತೂರಿನ ಜೆಎಸ್‌ಎಸ್ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನವು ಜೀವ ರಕ್ಷಕವಿದ್ದಂತೆ. ನಾವು ಊಟ ಮಾಡುವಾಗ ನಮಗೆ ಬೇಕಾದಷ್ಟನ್ನು ಮಾತ್ರ ಬಡಿಸಿಕೊಳ್ಳಬೇಕು. ವಿನಾಕಾರಣ ವ್ಯರ್ಥ ಮಾಡಬಾರದು. ಅನ್ನವನ್ನು ಅನ್ನಪೂರ್ಣೇಶ್ವರಿಗೆ ಹೋಲಿಸಲಾಗುತ್ತದೆ ಎಂದರು.
ಒಂದು ವರದಿ ಪ್ರಕಾರ ಭಾರತದಲ್ಲಿ ಶೇ.10 ರಷ್ಟು ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಅನೇಕ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ರೈತರು ಕಷ್ಟಪಟ್ಟು ಶ್ರಮವಹಿಸಿ ಆಹಾರ ಧಾನ್ಯ ಬೆಳೆಯುತ್ತಾರೆ. ಅವರಿಗೆ ಗೌರವ ಕೊಡಬೇಕು. ಆಹಾರವನ್ನು ವ್ಯರ್ಥ ಮಾಡುತ್ತಿದ್ದರೆ, ಭವಿಷ್ಯದಲ್ಲಿ ಆಹಾರದ ಕೊರತೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಚಿಂತಕ ಎಚ್.ಕೆ. ವಿವೇಕಾನಂದ ಮಾತನಾಡಿ, ಭಾರತದಲ್ಲಿ ಬಹುಸಂಖ್ಯಾತ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಎಳನೀರು, ಹಣ್ಣು, ತರಕಾರಿಗಳನ್ನು ಸೇವಿಸಬೇಕು. ಇಂದಿನ ದಿನಗಳಲ್ಲಿ ಮಠ ಮಾನ್ಯಗಳು ಆಹಾರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಬೆಂಗಳೂರು ನಗರದ ಆಹಾರ ಸಂರಕ್ಷಣಾ ಜನಜಾಗೃತಿ ಸಂಚಾಲಕ ಎಂ.ಯುವರಾಜು, ಸದಸ್ಯ ವೆಂಕಟಗಿರಿ, ಬಸವೇಶ್ವರ ಬಾಲಕರ ವಿದ್ಯಾರ್ಥಿನಿಲಯದ ನಿಲಯ ಪಾಲಕ ಮಹಾದೇವಪ್ರಸಾದ್, ಅಕ್ಕಮಹಾದೇವಿ ವಿದ್ಯಾರ್ಥಿನಿಲಯದ ನಿಲಯಪಾಲಕಿ ಪಿ.ಸುಶೀಲಾ ಇತರರಿದ್ದರು.