

ಚಿಕ್ಕೋಡಿ: ಪರಿಶಿಷ್ಟ ಸಮುದಾಯ ಕುರಿತು ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಯಲ್ಲಿ ಇರುವ ಕೆಲವು ನ್ಯೂನ್ಯತೆಯನ್ನು ಮೊದಲು ಸರಿಪಡಿಸಿ ಬಳಿಕ ಗಣತಿ ಮಾಡಬೇಕೆಂದು ಡಾ. ಬಾಬಾಸಾಹೇಬ ಅಂಬೇಡ್ಕರ್ ಜನಜಾಗೃತಿ ಸೇವಾ ಸಂಘದ ಅಧ್ಯಕ್ಷ ರಾವಸಾಹೇಬ ಕೀರೆ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ನಾಯಕರು ತಮ್ಮ ಮತ ಬ್ಯಾಂಕ್‌ಗಾಗಿ ಎಸ್‌ಸಿ ಸಮುದಾಯಕ್ಕೆ ಲಂಬಾಣಿ, ಬೋವಿ, ಕೊರಂ, ಬೇಡಜಂಗಮ ಸೇರಿ 101 ಉಪ ಜಾತಿಗಳನ್ನು ಸೇರಿಸಿದ್ದಾರೆ. ಇದರಿಂದ ಮೂಲ ದಲಿತರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಬೇಕು. ಸಮೀಕ್ಷೆಗೆ ಸಂಪೂರ್ಣ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಅಶೋಕ ಭಂಡಾರಕರ ಮಾತನಾಡಿ, ಜಿಲ್ಲೆಯಲ್ಲಿ ಬೇಡ ಜಂಗಮ ಜನಾಂಗವೇ ಇಲ್ಲ. ಆದರೂ, ಜಿಲ್ಲೆಯ 64 ಜನರಿಗೆ ಬೇಡ ಜಂಗಮ ಪ್ರಮಾಣ ಪತ್ರ ವಿತರಿಸಲಾಗಿದೆ. ಇದರಿಂದ ದಲಿತರಿಗೆ ಅನ್ಯಾಯವಾಲಿದೆ. ಹಾಗಾಗಿ ನಕಲಿ ಪ್ರಮಾಣ ಪತ್ರ ರದ್ದುಪಡಿಸಬೇಕು ಎಂದರು.
ದಲಿತ ಮುಖಂಡ ಎಂ.ಆರ್.ಮುನ್ನೋಳಿಕರ ಮಾತನಾಡಿ, ಸಮೀಕ್ಷೆ ನಡೆಸುವವರು ಒಂದೆಡೇ ಕುಳಿತುಕೊಳ್ಳದೇ ಪ್ರತಿ ಮನೆಗೂ ತೆರಳಿ ಸಮೀಕ್ಷೆ ನಡೆಸಬೇಕು. ಸಮೀಕ್ಷೆಗೆ ಕನಿಷ್ಠ ಮೂರು ತಿಂಗಳು ಅವಧಿ ನೀಡಬೇಕೆಂದು ಆಗ್ರಹಿಸಿದರು. ಅಪ್ಪಾಸಾಹೇಬ ಬ್ಯಾಳಿ, ಮನೋಹರ ಮಾಳಕರಿ, ನಂದಕುಮಾರ ದರಬಾರೆ, ಭಜರಂಗ್ ಖಾತೇದಾರ, ನಿರಂಜನ ಕಾಂಬಳೆ, ಸುದರ್ಶನ ತಮ್ಮಣ್ಣವರ ಇತರರಿದ್ದರು.