

ಮೈಸೂರು: ವಿಶ್ವವಿದ್ಯಾಲಯಗಳಲ್ಲಿ ಮಂಡನೆಯಾಗುವ ಸಂಶೋಧನೆಗಳು ಪುಸ್ತಕ ರೂಪದಲ್ಲಿ ಹೊರಬಂದು ಸಮಾಜಕ್ಕೆ ತಲುಪುವಂತಾಗಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯ ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯಗಳ ಸಮಾಜಕಾರ್ಯ ಅಧ್ಯಯನ ವಿಭಾಗದಿಂದ ನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿ.ಭವ್ಯಾ ಹಾಗೂ ಡಾ.ಎಂ.ಪಿ.ಸೋಮಶೇಖರ್ ರಚಿಸಿರುವ ‘ವರ್ಕ್ ವಿತ್ ಗ್ರೂಪ್ಸ್’ ಆಂಗ್ಲ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪ್ರತಿ ವರ್ಷ ನೂರಾರು ಪ್ರಬಂಧಗಳು ಮಂಡನೆಯಾಗುತ್ತವೆ. ಆದರೆ ಅವುಗಳಲ್ಲಿ ಹೆಚ್ಚಿನವು ಪುಸ್ತಕ ರೂಪದಲ್ಲಿ ಪ್ರಕಟಣೆಗೊಳ್ಳುವುದೇ ಇಲ್ಲ. ಇದರಿಂದ ಸಂಶೋಧನೆಯ ಅಂಶಗಳು ಸಮಾಜಕ್ಕೆ ತಲುಪುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂಶೋಧನೆಯ ಅಂಶಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು. ಅದಕ್ಕಾಗಿ ಸಂಶೋಧನೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಣೆ ಮಾಡುವ ಮೂಲಕ ಸಮಾಜಕ್ಕೆ ತಲುಪಿಸಿದರೆ ಅದರ ಸಾರ್ಥಕತೆ ಅಗುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯ ಸಂಚಾಲಕ ಮಾ.ವೆಂಕಟರಾಂ ಮಾತನಾಡಿ, ಸಂಘ ಜೀವಿಯಾದ ಮನುಷ್ಯ ಪರಸ್ಪರ ಸಹಕಾರದಿಂದ ಸಮಾಜದಲ್ಲಿ ಬದುಕಬೇಕು. ಸಂಘಟಿತವಾಗಿ ನಡೆದಾಗ ಅಸಾಧ್ಯ ಎನ್ನುವುದನ್ನು ಸಹ ಸಾಧ್ಯವಾಗಿಸಲು ಸಾಧ್ಯ ಎಂದರು.
ಕಲಿತವರು ಸಮಾಜದಲ್ಲಿ ಹಿಂದುಳಿದವರಿಗೆ ಕೈಲಾದ ಸಹಾಯ ಮಾಡಬೇಕು. ವಿದ್ಯೆ ಇಲ್ಲದವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ದಾರಿ ತೋರಿದರೆ ಉತ್ತಮ ಪ್ರಜೆಯಾಗುತ್ತಾನೆ. ನಾನು ಪದವಿ ಪಡೆದಾಗ ಬೆರಳೆಣಿಕೆಯಷ್ಟು ಜನರಿದ್ದ ಅಶೋಕಪುರಂನಲ್ಲಿ ಇಂದು ನೂರಾರು ಪದವೀಧರ ವಿದ್ಯಾರ್ಥಿಗಳು ಇದ್ದಾರೆ. ಹಾಗಾಗಿ ನಮ್ಮ ಪರಿಸರದಲ್ಲಿ ಇರುವವರಿಗೆ ಮಾರ್ಗದರ್ಶನ ನೀಡುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಯಾವುದಾದರೂ ಒಂದು ಬದಲಾವಣೆ ತರಲು ಹೊರಟಾಗ ಟೀಕೆ, ಅಡ್ಡಿ, ವಿರೋಧಗಳು ಬರುವುದು ಸಹಜ. ಆದರೆ ಅವುಗಳನ್ನು ದಾಟಿ ಮುಂದೆ ಬಂದಾಗ ಸಮಾಜ ಪರಿವರ್ತನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಕೊಂದಂಡರಾಮು ಆಶಯ ಭಾಷಣ ಮಾಡಿದರು. ಮೈಸೂರು ವಿಶ್ವವಿದ್ಯಾಲಯ ಸಮಾಜ ಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಚಂದ್ರಮೌಳಿ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕಿ ಎಚ್.ಪಿ.ಜ್ಯೋತಿ, ಲೇಖಕರಾದ ಜೆಎಸ್‌ಎಸ್ ಕಾಲೇಜು ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಎಂ.ಪಿ.ಸೋಮಶೇಖರ್, ಚಾಮರಾಜನಗರ ವಿವಿ ಅತಿಥಿ ಉಪನ್ಯಾಸಕಿ ಪಿ.ಭವ್ಯಾ ಇದ್ದರು.