

ಶಿಕಾರಿಪುರ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನ ಅತ್ಯಂತ ಪವಿತ್ರವಾದ ದಿನ. ಸಹಬಾಳ್ವೆ, ಸದ್ವಿಚಾರ, ಸಹನೆ ಮತ್ತು ಶಾಂತಿ ಅವರ ಸಂದೇಶ. ಇವುಗಳನ್ನು ನಾವು ಅವರ ವಚನಗಳಲ್ಲಿಯೂ ಕಾಣಬಹುದಾಗಿದೆ. ಅವರ ಸಂದೇಶಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಡಾ. ಹಾಫೀಜ್ ಕರ್ನಾಟಕಿ ತಿಳಿಸಿದರು.
ಪ್ರವಾದಿ ಮಹಮದ್ ಪೈಗಂಬರರ ಜನ್ಮದಿನದ (ಈದ್ ಮಿಲಾದ್) ಅಂಗವಾಗಿ ಗುರುವಾರ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸಮಿತಿಯಿಂದ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ವೇಳೆ ಅವರು ಮಾತನಾಡಿದರು.
ಶಿಕಾರಿಪುರದಲ್ಲಿ ಈ ಮಹತ್ವದ ಹಬ್ಬಕ್ಕೆ ಅನಗತ್ಯವಾದ ಡಿಜೆ ಸೇರಿದಂತೆ ಇತ್ಯಾದಿ ಮೆರವಣಿಗೆಗಳನ್ನು ನಾವು ನಿಲ್ಲಿಸಿ ಮಸೀದಿಗಳಲ್ಲಿಯೇ ಪ್ರಾರ್ಥನೆ ಮಾಡುತ್ತಿದ್ದೇವೆ. ಇದರಿಂದ ಯಾವುದೇ ತೆರನಾದ ಗಲಾಟೆ, ಗದ್ದಲಗಳಿಗೆ ಅವಕಾಶವಿರುವದಿಲ್ಲ. ಎಲ್ಲ ಧರ್ಮಗಳ ಸಾರವೂ ಒಂದೇ. ನಾವೆಲ್ಲರೂ ಒಂದಾಗಿ ಬಾಳಬೇಕು. ಹಿಂದು, ಮುಸ್ಲಿಂ ಬಂಧುಗಳು ಸದಾ ಸಹೋದರರಂತೆ ಬಾಳಬೇಕು ಎಂದು ಹೇಳಿದರು.
ಇಂದು ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಹಂಚುವ ದಿನ. ಬಡವರಿಗೆ ದಾನ ಮಾಡಿದರೆ ಪ್ರವಾದಿಗಳಿಗೆ ಸಂತಸವಾಗುತ್ತದೆ. ನಾವೆಲ್ಲರೂ ಒಂದು, ನಾವೆಲ್ಲರೂ ಬಂಧು. ಸಣ್ಣ ಸಣ್ಣ ವಿಚಾರಗಳು ಧರ್ಮ ಧರ್ಮಗಳ ನಡುವೆ ಬಿರುಕು ಮೂಡಿಸುತ್ತವೆ. ನಾವು ಸಂಕುಚಿತ ಮನೋಭಾವದಿಂದ ದೂರವಾಗಬೇಕು. ಹಬ್ಬಗಳು ಎಂದೆಂದಿಗೂ ಶಾಂತಿಯ ಸಂಕೇತವಾಗಬೇಕು ಎಂದರು.
ಕಾರ್ಯದರ್ಶಿ ಮಕ್ಬೂಲ್ ಅಹ್ಮದ್, ಉಪಾಧ್ಯಕ್ಷ ಹಬೀಬುಲ್ಲಾ, ಖಜಾಂಚಿ ಅಶ್ರಫ್ ಉಲ್ಲಾ, ಎಚ್.ಕೆ.ಫೌಂಡೇಶನ್ ಅಧ್ಯಕ್ಷ ಫಯಾಜ್ ಅಹ್ಮದ್, ಡಾ. ಶಿವಾನಂದ್ ಇತರರಿದ್ದರು.